ಯುವತಿಯ ಅಪಹರಣ ಯತ್ನ ಪ್ರಕರಣ: ದುಷ್ಕೃತ್ಯಕ್ಕೆ ಬಳಸಿದ್ದು ಬಾಡಿಗೆ ಕಾರು

Update: 2019-01-31 16:59 GMT

ಉಡುಪಿ, ಜ.31: ಬುಧವಾರ ಅಪರಾಹ್ನ ಯುವತಿಯೊಬ್ಬರನ್ನು ಬಲವಂತ ವಾಗಿ ಕಾರಿನಲ್ಲಿ ಕರೆದೊಯ್ಯುತಿದ್ದ ವೇಳೆ ನಗರದ ಬಲಾಯಿಪಾದೆ ರಿಕ್ಷಾ ನಿಲ್ದಾಣದ ಬಳಿ ಯುವತಿಯನ್ನು ರಸ್ತೆಗೆ ತಳ್ಳಿ ಬಳಿಕ ಅನಿವಾರ್ಯವಾಗಿ ಕಿನ್ನಿಮುಲ್ಕಿ ಬಳಿ ಕಾರು ಬಿಟ್ಟು ಪರಾರಿಯಾದ ದುಷ್ಕರ್ಮಿ ತನ್ನ ಕೃತ್ಯಕ್ಕೆ ಬಳಸಿದ್ದು ಬಾಡಿಗೆ ಕಾರನ್ನು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಈ ಅಂಶ ಪೊಲೀಸರ ತನಿಖೆಗೆ ವೇಳೆ ಬಹಿರಂಗಗೊಂಡಿದೆ ಎಂದು ವಿಶ್ವಾಸಾರ್ಹ ಮೂಲವೊಂದು ತಿಳಿಸಿದೆ. ಬುಧವಾರ ಯುವತಿಯ ಅಪಹರಣ ಯತ್ನಕ್ಕೆ ಬಳಸಿದ ಕೆಎ 20ಪಿ 7056 ನಂಬರಿನ ರಿಡ್ಜ್ ಕಾರು ಉಮೇಶ್ ಎಂಬವರಿಗೆ ಸೇರಿದೆ. ಆದರೆ ಆತ ಈಗಾಗಲೇ ಕಾರನ್ನು ಇನ್ನೊಬ್ಬರಿಗೆ ಮಾರಾಟ ಮಾಡಿದ್ದು, ಖರೀದಿಸಿದಾತ ಕಾರನ್ನು ದಿನ ಬಾಡಿಗೆಗೆ ಬಿಟ್ಟಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಆದರೆ ಕಾರನ್ನು ಖರೀದಿಸಿದಾತ ಇನ್ನೂ ಅದನ್ನು ತನ್ನ ಹೆಸರಿಗೆ ನೊಂದಾವಣಿ ಮಾಡಿಸಿಕೊಂಡಿಲ್ಲ. ಆರ್‌ಸಿಯನ್ನು ಮಾತ್ರ ಪಡೆದು ಆತ ಕಾರಿನಲ್ಲಿ ವ್ಯವಹಾರ ನಡೆಸುತಿದ್ದಾನೆ. ಇದು ಕಾರಿನ ನಿಜವಾದ ಮಾಲಕನನ್ನು ಕರೆದು ವಿಚಾರಣೆ ನಡೆಸಿದಾಗ ಬಹಿರಂಗಗೊಂಡಿದೆ. ಇದರಿಂದ ಈ ‘ಅಪಹರಣ’ ಪ್ರಕರಣದ ನಿಜವಾದ ಆರೋಪಿಯ ಪತ್ತೆಗೆ ಸ್ವಲ್ಪ ಹಿನ್ನಡೆಯುಂಟಾಗಿದೆ ಎಂದು ಪೊಲೀಸ್ ಮೂಲ ಒಪ್ಪಿಕೊಂಡಿದೆ.

ಪ್ರಕರಣ: ಯುವತಿಯ ಶಂಕಿತ ಅಪಹರಣ ಪ್ರಕರಣ ನಿನ್ನೆ ನಡೆದಿದೆ. ಮಂಗಳೂರಿನಿಂದ ಉಡುಪಿಯತ್ತ ಬರುತ್ತಿದ್ದ ರಿಟ್ಜ್ ಕಾರಿನಲ್ಲಿದ್ದ ಯುವತಿ ಬಲಾಯಿಪಾದೆ ಬಳಿ ಬರುವಾಗ ಬೊಬ್ಬೆ ಹೊಡೆದಿದ್ದು, ಕಿನ್ನಿಮುಲ್ಕಿ ರಿಕ್ಷಾ ನಿಲ್ದಾಣದ ಬಳಿ ಚಲಿಸುತ್ತಿದ್ದ ಕಾರಿನ ಬಾಗಿಲು ತೆರೆದು ಅರ್ಧ ದೇಹ ಹೊರ ಹಾಕಿದ್ದಳು. ಇದನ್ನು ಗಮನಿಸಿದ ಕಾರು ಚಾಲಕ ಕಾರನ್ನು ನಿಧಾನ ಮಾಡಿ ಯುವತಿಯನ್ನು ಹೊರದಬ್ಬಿ ಪರಾರಿಯಾಗಿದ್ದ. ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಆರೋಪಿ ಕೃತ್ಯಕ್ಕೆ ಬಳಸಿದ ಕಾರನ್ನು ಕಿನ್ನಿಮುಲ್ಕಿ ಲೇಬರ್ ಕಾಲನಿ ಬಳಿ ಪಾರ್ಕ್ ಮಾಡಿ ಬಸ್ ಹತ್ತಿ ಪರಾರಿಯಾಗಿದ್ದ ಎಂದು ಪ್ರತ್ಯಕ್ಷದರ್ಶಿ ರಿಕ್ಷಾ ಚಾಲಕರು ತಿಳಿಸಿದ್ದರು.

ಆದರೆ ಈ ಪ್ರಕರಣದ ಕುರಿತು ಈವರೆಗೆ ಯಾವ ಠಾಣೆಯಲ್ಲೂ ಪ್ರಕರಣ ದಾಖಲಾಗಿಲ್ಲ. ಅನಾಮಧೇಯ ಕಾರೊಂದು ಸಾರ್ವಜನಿಕ ಸ್ಥಳದಲ್ಲಿ ಪಾರ್ಕ್ ಮಾಡಿದ ಹಿನ್ನೆಲೆಯಲ್ಲಿ ಕಾರನ್ನು ತಮ್ಮ ಸುಪರ್ದಿಗೆ ಪಡೆದ ಮಲ್ಪೆ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸುತಿದ್ದಾರೆ.

ಈ ನಡುವೆ ಕಾರಿನಿಂದ ಹೊರಬಂದ ಯುವತಿ, ಇದೇ ವೇಳೆ ಹಿಂದಿನಿಂದ ಬರುತಿದ್ದ ಚಾಲಕ ಮತ್ತು ಓರ್ವ ಮಹಿಳೆ ಇದ್ದ ಪಜಿರೋ ಕಾರನ್ನೇರಿ ಮತ್ತೆ ಮಂಗಳೂರಿನತ್ತ ತೆರಳಿದ್ದಳು. ಇದೀಗ ತನಿಖೆಯಿಂದ ಈ ಯುವತಿಗೂ, ಪಜಿರೋ ಕಾರಿಗೂ ಯಾವುದೇ ಯಾವುದೇ ಸಂಬಂಧಿವಿಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ. ಒಟ್ಟಿನಲ್ಲಿ ಕುತೂಹಲ ಕೆರಳಿಸಿರುವ ಈ ಪ್ರಕರಣದ ಪ್ರಮುಖ ಅಂಶಗಳು ಇನ್ನಷ್ಟೇ ಸಂಪೂರ್ಣವಾಗಿ ಬಹಿರಂಗಗೊಳ್ಳಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News