ಫೆ.1, 2ರಂದು ಬಿಜೆಪಿಯಿಂದ ಬಬ್ಬುಸ್ವಾಮಿ ನೇಮೋತ್ಸವ
ಉಡುಪಿ, ಜ.31: ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಕಡಿಯಾಳಿ ಕುಂಜಿಬೆಟ್ಟಿನ ಜಿಲ್ಲಾ ಕಚೇರಿ ಬಳಿ ಇರುವ ಶ್ರೀಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳಿಗೆ ಫೆ.1 ಮತ್ತು 2ರಂದು ಧರ್ಮ ನೇಮೋತ್ಸವ ಸೇವೆ ನಡೆಯಲಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಐದು ಸ್ಥಾನಗಳನ್ನು ಗೆಲ್ಲಿಸಿಕೊಡಲು ಬಬ್ಬುಸ್ವಾಮಿಗೆ ಹರಕೆ ಹೇಳಿಕೊಳ್ಳಲಾಗಿದ್ದು, ಅದರಂತೆ ನಾಳೆ ಈ ನೇಮೋತ್ಸವ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಪ್ರಯುಕ್ತ ನಾಳೆ ಬೆಳಗ್ಗೆ 11:00ಗಂಟೆಗೆ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಹೂವಿನ ಪೂಜೆ ನಡೆಯಲಿದೆ. ಬಳಿಕ 12 ಗಂಟೆಗೆ ಬಿಜೆಪಿ ಜಿಲ್ಲಾ ಕಚೇರಿ ಬಳಿ ನೇಮೋತ್ಸವ ಚಪ್ಪರ ಮುಹೂರ್ತ ಹಾಗೂ ಮಹಾ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಜೆ 5ಕ್ಕೆ ನೇಮೋತ್ಸವ ಭಂಡಾರ ಮೆರವಣಿಗೆ ದೈವಸ್ಥಾನದಿಂದ ಹೊರಡಲಿದೆ. ಶ್ರೀಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ನೇಮೋತ್ಸವ ರಾತ್ರಿ 9:00ರಿಂದ ಮರುದಿನ ಫೆ.2ರ ಶನಿವಾರ ಬೆಳಗಿನವರೆಗೆ ನಡೆಯಲಿದೆ. ಅಪರಾಹ್ನ ಪರಿವಾರ ದೈವಗಳ ನೇಮೋತ್ಸವ ಮುಂದುವರಿಯಲಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.