ಕಾವ್ಯವು ಭಾಷೆಯ ಮೂಲಕ ವ್ಯಕ್ತವಾಗುವ ಕಲೆ: ಕುತ್ಯಾಳ ನಾಗಪ್ಪ ಗೌಡ
ಮಂಗಳೂರು, ಜ.31: ಕವಿಯ ಸ್ವಂತಿಕೆಗೆ ಮುದ್ರೆಯೊತ್ತುವ ಕೌಶಲ ಕಾವ್ಯಕ್ಕಿದ್ದುದರಿಂದಲೇ ಭಾಷೆಯ ಮೂಲಕ ವ್ಯಕ್ತಗೊಳಿಸುವ ಕಲೆಯಾಗಿ ಕಾವ್ಯ ರೂಪುಗೊಳ್ಳುತ್ತದೆ ಎಂದು ಕುತ್ಯಾಳ ನಾಗಪ್ಪ ಗೌಡ (ಕಿರಣ)ಅಭಿಪ್ರಾಯಪಟ್ಟರು.
ನಗರದ ಪುರಭವನದಲ್ಲಿ ಜರುಗುತ್ತಿರುವ ದ.ಕ.ಜಿಲ್ಲಾ 23ನೆ ಕನ್ನಡ ಸಾಹಿತ್ಯ ಸಮ್ಮೇಳನದ ಮೂರನೆ ದಿನವಾದ ಗುರುವಾರ ನಡೆದ ದ್ವಿತೀಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾವ್ಯ ಕ್ಷೇತ್ರಕ್ಕೆ ದ.ಕ.ಜಿಲ್ಲೆಯು ಸಾಕಷ್ಟು ಕೊಡುಗೆಯನ್ನು ನೀಡಿದೆ. ಸಾಹಿತ್ಯದಲ್ಲಿ ಕಾವ್ಯಕ್ಕೆ ತನ್ನದೇ ಆದ ಶಕ್ತಿ ಮತ್ತು ಮನ್ನಣೆ ಇದೆ. ಅನುಭವ, ಅರಿವು, ಅಧ್ಯಯನವಿದ್ದರೆ ಮಾತ್ರ ಕವಿತೆ ಬರೆಯಲು ಸಾಧ್ಯ ಎಂಬ ಭಾವನೆ ಸಲ್ಲದು. ಪ್ರತಿಭೆಯೊಂದಿಗೆ ಹೊಸತನ್ನು ಸೃಷ್ಟಿಸಬಲ್ಲೆ ಎಂಬ ಹುಮ್ಮಸ್ಸೂ ಬೇಕು. ನಿರ್ಲಿಪ್ತತೆಯ ಭಾವ ಮತ್ತು ತನ್ಮಯತೆಯೊಂದಿಗೆ ಕವನ ರಚಿಸಲು ಮುಂದಾದರೆ ಉತ್ತಮ ಕವನಗಳನ್ನು ಸೃಷ್ಟಿಸಲು ಸಾಧ್ಯ ಎಂದು ಕುತ್ಯಾಳ ನಾಗಪ್ಪ ಗೌಡ ಹೇಳಿದರು.
ಅರುಣಾ ನಾಗರಾಜ್, ಲೀಲಾ ಕುಮಾರಿ ತೋಡಿಕಾನ, ವಸಂತಿ ಟಿ. ನಿಡ್ಲೆ, ಭವ್ಯಾ ನಿಡ್ಪಳ್ಳಿ, ನಾರಾಯಣ ಕುಂಬ್ರ, ಪದ್ಮಲತಾ ಮೋಹನ್ ಅರಸಿನಮಕ್ಕಿ, ಸೇರಾಜೆ ಶ್ರೀನಿವಾಸ ಭಟ್, ಪೂವಪ್ಪ ನೇರಳಕಟ್ಟೆ, ಬಶೀರ್ ಬಂಟ್ವಾಳ, ಡಾ. ಕರುಣಾಕರ ಶೆಟ್ಟಿ ಮುಂಬೈ, ವಿ. ಸುಬ್ರಹ್ಮಣ್ಯ ಭಟ್ ತುಂಬೆ, ಗಣೇಶ್ ಪ್ರಸಾದ್ ಪಾಂಡೇಲು ಅವರುಗಳು ಮಹಿಳಾ ಸಂವೇದನೆ, ಕನಸಿನ ಕನವರಿಕೆ, ರಾಷ್ಟ್ರ ಪ್ರೇಮದ ಬಗ್ಗೆ ಕವನಗಳನ್ನು ವಾಚಸಿದರು.
ಶೈಲಜಾ ಶ್ರೀಕಾಂತ್ ರಾವ್ ಸ್ವಾಗತಿಸಿದರು. ಸುಜಾತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.