×
Ad

ಸಿಇಟಿ-2019 ಅರ್ಜಿ ಸಲ್ಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲ

Update: 2019-02-01 18:42 IST

ಪುತ್ತೂರು, ಫೆ. 1: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಸಿಇಟಿ-2019 ಪರೀಕ್ಷೆಯ ಬರೆಯ ಬಯಸುವ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಇಂದಿನಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ ಅರ್ಜಿ ಸಲ್ಲಿಕೆಗೆ ಸಂಬಂಧಿಸಿ ಹಲವಾರು ಲೋಪ ದೋಷಗಳನ್ನು ವಿದ್ಯಾರ್ಥಿಗಳು ಎದುರಿಸು ತ್ತಿದ್ದಾರೆ ಎಂದು ಪುತ್ತೂರು ಕ್ರಸ್ಟ್ ಸೆಂಟರ್ ಫಾರ್ ರಿಸರ್ಚ್ ಆ್ಯಂಡ್ ಡೆವಲಪ್‍ಮೆಂಟ್‍ನ ಮುಖ್ಯಸ್ಥ ಶರತ್ ಆಳ್ವ ಕರಿಂಕ ಆರೋಪಿಸಿದ್ದಾರೆ. 

ಸಿಇಟಿಯ ಮಾಹಿತಿ ಪುಸ್ತಿಕೆ(ಬ್ರೋಷರ್)ಯನ್ನು ಪ್ರಕಟಿಸಿಲ್ಲ. ಹಾಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ ಮಾಹಿತಿಯ ಅಲಭ್ಯತೆಯು ಪ್ರಮುಖ ಲೋಪವಾಗಿದೆ. ಸಿಇಟಿಯ ಶುಲ್ಕ ವಿವರಗಳ ಮಾಹಿತಿಯನ್ನು ಒದಗಿಸಿಲ್ಲ. ಆನ್‍ಲೈನ್ ಅರ್ಜಿಯ ವಿದ್ಯಾಭ್ಯಾಸದ ವಿವರಗಳು ಪೇಜ್‍ನಲ್ಲಿ ಅಂಕಗಳನ್ನು ನಮೂದಿಸುವ ಕೊಂಡಿಯನ್ನು ಒದಗಿಸಲಾಗಿದ್ದು, ಈ ಕೊಂಡಿಯನ್ನು ಕ್ಲಿಕ್ಕಿಸಿದಾಗ 2018ರ ಅರ್ಜಿ ನಮೂನೆಯನ್ನು ತೋರಿಸುತ್ತದೆಯೇ ಹೊರತು 2019ರ ಅರ್ಜಿ ನಮೂನೆಯನ್ನು ತೋರಿಸುತ್ತಿಲ್ಲ.

ಕೆಇಎ ಈ ಎಲ್ಲಾ ಎಡವಟ್ಟುಗಳನ್ನು ಟೆಸ್ಟ್ ಮಾಡದೆಯೇ ಆನ್‍ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿರುವುದು ಸಂಸ್ಥೆಯ ಬೇಜವಾಬ್ದಾರಿ ಹಾಗೂ ಕಳಪೆ ಗುಣಮಟ್ಟವನ್ನು ತೋರಿಸುತ್ತದೆ ಎಂದು ಆರೋಪಿಸಿರುವ ಅವರು ಸಾಮಾನ್ಯವಾಗಿ ಎಲ್ಲಾ ಪೂರ್ವ ಸಿದ್ದತೆಗಳೊಂದಿಗೆ ಆನ್‍ಲೈನ್ ಅರ್ಜಿಯ ಸೌಲಭ್ಯವನ್ನು ಕಲ್ಪಿಸಿಕೊಡಬೇಕಾಗಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯಾವುದೇ ಪೂರ್ವಸಿದ್ದತೆಗಳಿಲ್ಲದೆ ಆನ್‍ಲೈನ್ ಅರ್ಜಿಯ ಸೌಲಭ್ಯವನ್ನು ಒದಗಿಸಿ ನಂತರದಲ್ಲಿ ಬೇಡಿಕೆಗೆ ಅನುಗುಣವಾಗಿ ಒದಗಿಸುವ ನಿಟ್ಟಿನಲ್ಲಿರುವಂತೆ ತೋರುತ್ತಿದೆ. ಅರ್ಜಿಯಲ್ಲಿ ತುಂಬಾ ತಾಂತ್ರಿಕ ಲೋಪದೋಷಗಳು ಕಂಡು ಬರುತ್ತಿರುವುದರಿಂದ ಕೆಇಎ ತಾಂತ್ರಿಕ ಲೋಪದೋಷಗಳನ್ನು ಸರಿಪಡಿಸಲು 2ದಿನಗಳಾದರೂ ಬೇಕಾಗಬಹುದು. ಈ ಹಿನ್ನಲೆಯಲ್ಲಿ ಪರೀಕ್ಷೆ ಬರೆಯಲಿಚ್ಚಿಸುವ ವಿದ್ಯಾರ್ಥಿಗಳು ಮೊದಲ 1 ಅಥವಾ 2 ದಿನಗಳು ಅರ್ಜಿ ಸಲ್ಲಿಕೆ ಮಾಡುವುದು ಸೂಕ್ತವಲ್ಲ ಎಂದು ಅವರು ಸಲಹೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News