×
Ad

ಕೇಂದ್ರ ಬಜೆಟ್‌ನಲ್ಲಿ ರೈತರ ಸಂಪೂರ್ಣ ನಿರ್ಲಕ್ಷ್ಯ: ಸಚಿವ ಖಾದರ್

Update: 2019-02-01 20:55 IST

ಮಂಗಳೂರು, ಫೆ.1: ಮಧ್ಯಮ ವರ್ಗದವರಿಗೆ ಅದರಲ್ಲೂ ಕರ್ನಾಟಕ ರಾಜ್ಯಕ್ಕೆ ಬಜೆಟ್‌ನಿಂದ ತೀವ್ರ ನಿರಾಸೆಯಾಗಿದೆ. ಕೇಂದ್ರ ಬಜೆಟ್ ಜನಪ್ರಿಯವೂ ಅಲ್ಲ; ಜನಪರವೂ ಅಲ್ಲ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.

ಯುವಕರು, ವಿದ್ಯಾರ್ಥಿಗಳಿಗೆ ಬಜೆಟ್‌ನಲ್ಲಿ ಯಾವುದೇ ರೀತಿಯ ಆದ್ಯತೆಯನ್ನು ನೀಡಲಾಗಿಲ್ಲ. ಸಮಗ್ರ ಅಭಿವೃದ್ಧಿಯನ್ನು ಅದರಲ್ಲೂ ದಕ್ಷಿಣ ಭಾರತವನ್ನು ನಿರ್ಲಕ್ಷಿಸಿದ ಬೇಜವಾಬ್ದಾರಿ ಮತ್ತು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ರೂಪಿಸಲಾದ ಸುಳ್ಳು ಭರವಸೆಗಳನ್ನು ಒಳಗೊಂಡ ಬಜೆಟ್ ಇದಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

 ರೈತರ, ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್ ಇದಾಗಿದೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ 6 ಸಾವಿರ ರೂ. ಪಾವತಿಸುವುದು ಐತಿಹಾಸಿಕ ಕ್ರಮವಾಗಿದೆ. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಘೋಷಿಸುವ ಮೂಲಕ ಮೀನುಗಾರರ ದಶಕಗಳ ಹಿಂದಿನ ಬೇಡಿಕೆ ಈಡೇರಿಸಲಾಗಿದೆ. ಬಜೆಟ್‌ನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಳ ಮಾಡುವ ಮೂಲಕ ಪ್ರಧಾನಿ ಮೋದಿ ಮಧ್ಯಮ ವರ್ಗದವರಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

ಬ್ರಾಡ್‌ಗೇಜ್ ಮಾರ್ಗದಲ್ಲಿ ಮಾನವ ರಹಿತ ರೈಲ್ವೆ ಕ್ರಾಸಿಂಗ್ ನಿರ್ಮಾಣ, ಹೈನುಗಾರಿಕೆ ಉತ್ತೇಜನಕ್ಕೆ ಕಾಮಧೇನು ಯೋಜನೆ, ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2 ಬಡ್ಡಿ ರಿಯಾಯಿತಿ, ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3 ಬಡ್ಡಿ ವಿನಾಯಿತಿ, ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ, ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂ.ಪಿಂಚಣಿ ಸ್ವಾಗತಾರ್ಹ ಯೋಜನೆಗಳಾಗಿವೆ.
-ನಳಿನ್ ಕುಮಾರ್ ಕಟೀಲ್
ಸಂಸದರು ದ.ಕ.

ಇದು ಸುಳ್ಳಿನ ಕಂತೆಯಿಂದ ಕೂಡಿದ ವಿಚಾರಗಳು. ಇದ್ಯಾವುದು ಕೂಡ ಜಾರಿಯಾಗುವಂತದಲ್ಲ. ಈ ಕೊನೆಯ ಬಜೆಟ್‌ನ್ನು ಲೋಕಸಭಾ ಚುನಾವಣೆಯ ಪ್ರಣಾಳಿಕೆ ಎನ್ನಬಹುದು. ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡಿರುವುದು ಲಾಲಿಪಪ್ ನೀಡಿದಂತಾಗಿದೆ. ಅಂತೂ ಎಲ್ಲಾ ವರ್ಗದವರ ಮುಂಗೈಗೆ ತುಪ್ಪಸವರಿದಂತಹ ನಿರಾಶಾದಾಯಕ ಬಜೆಟ್ ಇದಾಗಿದೆ.
- ಕೆ.ಹರೀಶ್ ಕುಮಾರ್
ಅಧ್ಯಕ್ಷರು, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಮಂಡಿಸಿದ ಬಜೆಟ್ ಸ್ವಾಗತಾರ್ಹವಾಗಿದೆ. ಬಜೆಟ್‌ನಲ್ಲಿ ನೇರ ಆದಾಯ ತೆರಿಗೆಯು ಮಧ್ಯಮ ವರ್ಗದ ಜನರಿಗೆ ಹಾಗೂ ಕೈಗಾರಿಕೆಗಳಿಗೆ ಪ್ರಯೋಜನಗಳನ್ನು ನೀಡಿದೆ. ಎಂಎಸ್‌ಎಂಎನಲ್ಲೂ ಸಣ್ಣ ಪುಟ್ಟ ಕೈಗಾರಿಕೆಗಳನ್ನು ಆರಂಭಿಸಲು ಶೇ.2ರಷ್ಟು ಆದಾಯ ತೆರಿಗೆಯನ್ನು ಕಡಿತಗೊಳಿಸಿದೆ. ರೈತರಿಗೆ ವರ್ಷಕ್ಕೆ 6,000 ರೂ. ಸಹಾಯಧನವನ್ನು ಬಜೆಟ್‌ನಲ್ಲಿ ನೀಡಲಿದ್ದು, ಅಸಂಘಟಿತ ಕಾರ್ಮಿಕ ವರ್ಗಗಳಿಗೂ ಸಹಾಯಧನ ಹಂಚಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಬಜೆಟ್‌ನಲ್ಲಿ ಎಲ್ಲ ವರ್ಗಗಳನ್ನು ಸಂತುಷ್ಠಗೊಳಿಸಲಾಗಿದೆ.
-ಅಬ್ದುಲ್ ಹಮೀದ್ ಪಿ.ಬಿ.
ಅಧ್ಯಕ್ಷರು, ಕೆಸಿಸಿಐ ಮಂಗಳೂರು

ಭಾರತದ ಇತಿಹಾಸದಲ್ಲೇ ಸಾಮಾಜಿಕ ಕಳಕಳಿಯಿಂದ ಕೂಡಿದ ಅತ್ಯುತ್ತಮ ಬಜೆಟ್ ಇದಾಗಿದೆ. ಈ ಬಜೆಟನ್ನು ರೈತರಿಗೆ, ಮಧ್ಯಮ ವರ್ಗದ ಜನರಿಗೆ ವಿಶೇಷ ಆಸ್ಥೆ ವಹಿಸಿ ಸಿದ್ಧಪಡಿಸಲಾಗಿದೆ.ಕರಾವಳಿ ಭಾಗವನ್ನೂ ವಿಶೇಷವಾಗಿ ಪರಿಗಣಿಸಿ ಪ್ರತ್ಯೇಕ ಮೀನುಗಾರಿಕಾ ಇಲಾಖೆ ಸ್ಥಾಪನೆ, ಮೀನುಗಾರರ ಆರ್ಥಿಕ ಸುಧಾರಣೆಗಾಗಿ ಮತ್ತು ಪಶು ಸಂಗೋಪನಾ ಕ್ಷೇತ್ರಕ್ಕೂ ಶೇ.2ರಷ್ಟು ಬಡ್ಡಿ ವಿನಾಯಿತಿ, ಸಾಗರಮಾಲಾ ಯೋಜನೆಯ ಮೂಲಕ ಬಂದರು ಅಭಿವೃದ್ಧಿಯನ್ನು ವಿಶೇಷವಾಗಿ ಪರಿಗಣಿಸಲಾಗಿದೆ. ರೈತರ ಸಂಕಷ್ಟವನ್ನು ಮನದಲ್ಲಿಟ್ಟುಕೊಂಡು 2 ಹೆಕ್ಟೇರ್ ಭೂಮಿಯಿರುವ ರೈತನ ಖಾತೆಗೆ 6 ಸಾವಿರ ಸಹಾಯಧನ,ರೈತರ ಸಾಲಕ್ಕೆ ಶೇ.2ರಷ್ಟು ಬಡ್ಡಿ ವಿನಾಯಿತಿ, ಅಸಂಘಟಿತ ವಲಯದ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಪ್ರಧಾನಮಂತ್ರಿ ಶ್ರಮಯೋಗಿ ಯೋಜನೆಯಡಿ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ ನೀಡುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಜನರ ಬಗ್ಗೆ ಕಾಳಜಿ ವಹಿಸಲಾಗಿದೆ.
- ವೇದವ್ಯಾಸ ಕಾಮತ್
ಶಾಸಕರು, ಮಂಗಳೂರು ದಕ್ಷಿಣ ಕ್ಷೇತ್ರ

ದೇಶದ 9 ರಾಜ್ಯ ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 8 ಕೋಟಿ ಮೀನುಗಾರರಿದ್ದು, ಒಂದಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ. ಸಮಸ್ಯೆಗಳ ಪರಿಹಾರ ಮತ್ತು ಮೀನುಗಾರರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಬೇಕು ಎಂದು ನಾವು ಈ ಹಿಂದಿನಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಕೇಂದ್ರ ಸರಕಾರ ಈ ಬಜೆಟ್‌ನಲ್ಲಿ ಪ್ರತ್ಯೇಕ ಸಚಿವಾಲಯದ ಘೋಷಣೆ ಮಾಡಿದ್ದರೆ ನಾವದನ್ನು ಸ್ವಾಗತಿಸುತ್ತೇವೆ. ಅದು ಬಿಟ್ಟು ಕೇವಲ ಇಲಾಖೆಯ ಘೋಷಣೆ ಮಾಡಿದ್ದರೆ ನಾವದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ನಮಗೆ ಪ್ರತ್ಯೇಕ ಸಚಿವಾಲಯವೇ ಬೇಕು. ಅದಕ್ಕಾಗಿ ಮುಂದೆಯೂ ಹೋರಾಟ ಮಾಡಲು ಸಿದ್ಧ.
- ವಾಸುದೇವ ಬೋಳೂರು
ಉಪಾಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ವೆಲ್ಫೇರ್ ಫೆಡರೇಶನ್

ಕೇಂದ್ರ ಸರಕಾರದ ಹಣಕಾಸು ಸಚಿವರು ಮಧ್ಯಮ ವರ್ಗ, ಸಣ್ಣ ರೈತರು ಮತ್ತು ಗ್ರಾಮೀಣ ಜನತೆಗೆ ಅನೇಕ ಕೊಡುಗೆಗಳ ಬಜೆಟನ್ನು ಮಂಡಿಸಿದ್ದಾರೆ. ಹಣಕಾಸು ಸಚಿವರು ವಿವಿಧ ವರ್ಗಗಳ ಜನತೆಯ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ಜಾಣ್ಮೆಯ ಸಮತೋಲಿತ ಬಜೆಟನ್ನು ನೀಡಿದ್ದಾರೆ. ಭಾರತವನ್ನು ತೈಲ, ಡಿಜಿಟಲ್ ಇಂಡಿಯಾ, ಆರೋಗ್ಯ ಹಾಗೂ ಆಹಾರ ಕ್ಷೇತ್ರಗಳಲ್ಲಿ ಸ್ವಯಂ ಶಕ್ತಿಶಾಲಿಯನ್ನಾಗಿಸುವ ಮೇಕಿಂಗ್ ಇಂಡಿಯಾದಂತಹ ದೃಷ್ಟಿಕೋನವನ್ನು ಸಮರ್ಪಕ ಹೂಡಿಕೆಯಿಂದ ಮಾತ್ರವೇ ಮಾಡಲು ಸಾಧ್ಯ.ಆದಾಯ ತೆರಿಗೆಯ ಮಿತಿಯನ್ನು 5 ಲಕ್ಷಗಳಿಗೆ ಏರಿಕೆ ಮಾಡಿರುವುದು, ಅಸಂಘಟಿತ ವಲಯಕ್ಕೆ ಹೊಸ ಪಿಂಚಣಿ ಯೋಜನೆ ಮತ್ತು ಇತರ ಕಾರ್ಮಿಕ ಸ್ನೇಹಿ ಕ್ರಮಗಳು ಉತ್ತಮವಾಗಿವೆ. ಬಜೆಟ್‌ನ ದೃಷ್ಟಿಕೋನ ಯಥಾವತ್ತಾಗಿ ಜಾರಿಯಾಗುವ ಅಗತ್ಯವಿದೆ. ನೋಟು ಅಮಾನ್ಯೀಕರಣದಿಂದಾಗಿ ಉದ್ದಿಮೆಗಳಲ್ಲಿ ಉದ್ಯೋಗವಕಾಶ ಸೃಷ್ಟಿಸಲು ಸಾಧ್ಯವಾಗದೆ ತಲೆದೋರಿರುವ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಯೋಜನೆಗಳನ್ನು ರೂಪಿಸಬೇಕಾಗಿದೆ.
-ಬಿ.ಎ. ನಝೀರ್
ಅಧ್ಯಕ್ಷರು, ಕೆನರಾ ಪ್ಲಾಸ್ಟಿಕ್ ಉತ್ಪಾದಕರ ಸಂಘ, ಬೈಕಂಪಾಡಿ

ರೈತರ ಸ್ವಾಭಿಮಾನ ಪ್ರಶ್ನಿಸಿದ ರೈತ ವಿರೋದೀ ಬಜೆಟ್ ಇದಾಗಿದೆ. ಸಣ್ಣ ರೈತರಿಗೆ ವಾರ್ಷಿಕ 6,000 ರೂ.ಗಳನ್ನು 3 ಕಂತುಗಳಲ್ಲಿ ತಲಾ 2,000 ನೇರ ಖಾತೆಗೆ ಭರಿಸುವ ಯೋಜನೆ ದೇಶದ ರೈತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ರೈತರು ಯಾವುದೇ ಭಿಕ್ಷೆಯನ್ನು ಕೇಳಿಲ್ಲ. ಸರಕಾರಗಳ ತಪ್ಪುನೀತಿಯಿಂದಾಗಿ ವಿದೇಶಿ ವ್ಯಾಪಾರ ಒಪ್ಪಂದಗಳು ಹಾಗೂ ಪ್ರಾಕೃತಿಕ ವಿಕೋಪ ಮತ್ತು ಬರದಿಂದಾದ ನಷ್ಟವನ್ನು ತುಂಬಿ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ. ಈ ಅವಮಾನಕ್ಕೆ ತೀರುಗೆಟಾಗಿ 2019ರ ಚುನಾವಣೆಯಲ್ಲಿ ‘ಮೋದಿ ಹಟವೋ ಕಿಸಾನ್ ಕ ಬಚಾವೋ’ ಆಂದೋಲನ ನಡೆಸುವ ಸಮಯ ಬಂದಿದೆ.
-ರವಿಕಿರಣ್ ಪುಣಚ
ರಾಜ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಕೇಂದ್ರ ಸರಕಾರ ಮಂಡಿಸಿದ ಕೊನೆಯ ಬಚೆಟ್‌ನಲ್ಲೂ ಅಚ್ಚೇದಿನ್ ಬರಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂಬ ಭರವಸೆ ಹುಸಿಯಾಗಿದೆ. ಬಜೆಟ್‌ನಲ್ಲಿ ಮಂಡಿಸಿರುವ ಯೋಜನೆಗಳು ಯುವಜನರಿಗೆ ಆಕಾಶದಲ್ಲಿರುವ ನಕ್ಷತ್ರಗಳನ್ನು ತೋರಿಸಿದಂತಿದೆ. ಕರ್ನಾಟಕ ಸೇರಿದಂತೆ ಕೆಲವು ಬಿಜೆಪಿಯೇತರ ರಾಜ್ಯಗಳು ರೈತರ ಸಾಲ ಮನ್ನಾ ಮಾಡುವ ಬಗ್ಗೆ ಸಕಾರಾತ್ಮಕ ಹೆಜ್ಜೆಗಳನ್ವಿಟ್ಟಿದ್ದರೆ ಕೇಂದ್ರದ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಘೋಷಣೆಯ ನಿರೀಕ್ಷೆ ಹುಸಿಯಾಗಿದೆ. ಆತ್ಮಹತ್ಯೆ ದಾರಿ ಹಿಡಿದಿರುವ ಅನ್ನದಾತನಿಗೆ ವಾರ್ಷಿಕ 6,000 ಸಾವಿರ ರೂ. ಸಹಾಯಧನ ರೈತನ ಸಂಕಷ್ಟಗಳಿಂದ ಪಾರು ಮಾಡಲು ಸಾಧ್ಯವಿದೆಲ್ಲ. ಎಲ್ಲಾ ಕಾರ್ಮಿಕರಿಗೆ ಕನಿಷ್ಟ ವೇತನ 18,000 ರೂ. ಘೋಷಣೆ ಮಾಡಲಿಲ್ಲ. ಬದಲಿಗೆ ಕಾರ್ಮಿಕ ಕಾನೂನುಗಳ ದುರ್ಬಲಗೊಳಿಸಿ ಶ್ರಮಿಕ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ. ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಅಪಾರ ನಷ್ಟಕ್ಕೊಳಗಾಗಿರುವ ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯಗಳಿಗೆ ವಿಶೇಷ ಪ್ಯಾಕೇಜು ಘೋಷಣೆ ಮಾಡದೆ ಪರಿಸರ ಮತ್ತು ಪ್ರಕೃತಿಯ ವಿರೋಧಿಯಾಗಿ ಮೋದಿ ಸರಕಾರ ಬಜೆಟ್ ಮಂಡಿಸಿದೆ.

-ಬಿ.ಕೆ.ಇಮ್ತಿಯಾಝ್, ಅಧ್ಯಕ್ಷರು, ಡಿವೈಎಫ್‌ಐ ದ.ಕ.ಜಿಲ್ಲೆ

ಜಾಗತೀಕರಣದ ಪರವಾದ ಈ ಬಜೆಟ್‌ನಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಸಾಯಿನಾಥ್ ವರದಿಯನ್ನು ಕಡೆಗಣಿಸಿ ರೈತರನ್ನು ಮೋಸ ಮಾಡಿದ್ದಾರೆ.

- ವಸಂತ ಆಚಾರಿ, ಮುಖಂಡರು, ಸಿಪಿಎಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News