×
Ad

ಕನಸು ಸಾಕಾರವಾಗಲು ಪರಿಶ್ರಮ ಅಗತ್ಯ: ರಿಷಬ್ ಶೆಟ್ಟಿ

Update: 2019-02-01 20:56 IST

ಉಡುಪಿ, ಫೆ.1: ಬದುಕಿನಲ್ಲಿ ಕನಸು ಕಾಣುವುದು ಮುಖ್ಯ. ಆ ಕನಸುಗಳನ್ನೇ ಗುರಿಯಾಗಿಸಿ ಪ್ರಯತ್ನಪಟ್ಟರೆ ಯಶಸ್ಸು ಸಾಧ್ಯವಾಗುತ್ತದೆ. ಆದುದರಿಂದ ಕನಸು ಕಾಣುವುದರಲ್ಲಿ ಸೀಮಿತವಾಗದೇ ಪರಿಶ್ರಮದೊಂದಿಗೆ ಮುನ್ನಡೆಯಬೇಕು ಎಂದು ಕನ್ನಡ ಚಲನಚಿತ್ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ಉಡುಪಿ ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಶುಕ್ರವಾರ ನಡೆದ 60ನೆ ವಾರ್ಷಿಕೋತ್ಸವ ಹಾಗೂ ಜನಪದ ವೈದ್ಯ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಜನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ಜನಪದ ವೈದ್ಯ ಸಿರಿ ಪ್ರಶಸ್ತಿಯನ್ನು ಹೊಸನಗರದ ಕರಿನಗೊಳ್ಳಿಯ ಜನಪದ ವೈದ್ಯ ಕೆ.ಆರ್.ಭೋಜರಾಜ ಅವರಿಗೆ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ ಆಚಾರ್ಯ ವಹಿಸಿದ್ದರು. ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಅಧ್ಯಯನ ಕೇಂದ್ರದ ಸಹಾಯಕ ಡೀನ್ ಡಾ.ನಾಗರಾಜ್ ಎಸ್., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಉಪಸ್ಥಿತರಿದ್ದರು.

ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಅಧ್ಯಯನ ಕೇಂದ್ರದ ಡೀನ್ ಡಾ. ನಿರಂಜನ್ ರಾವ್ ವಾರ್ಷಿಕ ವರದಿ, ಕೇಂದ್ರದ ಮುಖ್ಯಸ್ಥೆ ಡಾ.ಚೈತ್ರ ಎಸ್. ಹೆಬ್ಬಾರ್ ಸನ್ಮಾನ ಪತ್ರ ಹಾಗೂ ವಿದ್ಯಾರ್ಥಿ ಸಂಘ 2017-18ರ ಅಧ್ಯಕ್ಷೆ ಮೇಘನಾ ಸುರೇಗಾಂವಕರ್ ಹಿಂದಿನ ವರ್ಷದ ಕಾರ್ಯ ಚಟುವಟಿಕೆಗಳ ವರದಿ ವಾಚಿಸಿದರು.

ವಿದ್ಯಾರ್ಥಿ ಸಂಘದ ಅಧ್ಯಕ್ಷ ಪರೀಕ್ಷಿತ್ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀನಿಧಿ ಶೆಟ್ಟಿ ವಂದಿಸಿದರು. ಪ್ರಶಸ್ತಿ ಶೆಟ್ಟಿ, ಸುಮಂಗಳ ಹೆಗ್ಡೆ, ಸಚಿನ್ ಹಾಗೂ ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು. ನಂತರ ದಸರಾ ವೈಭವ ಎಂಬ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News