ಅತ್ತೂರು ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೆ ವೈಭವಯುತ ತೆರೆ

Update: 2019-02-01 15:37 GMT

ಕಾರ್ಕಳ, ಫೆ.1: ಕಳೆದ ಐದು ದಿನಗಳಿಂದ ನಡೆಯುತ್ತಿರುವ ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವು ಗುರುವಾರ ವಿದ್ಯುಕ್ತವಾಗಿ ತೆರೆ ಕಂಡಿತು.

ಮಹೋತ್ಸವದ ಕೊನೆಯ ದಿನವನ್ನು ಮಾರ್ಗದರ್ಶಿ ಮಾತೆಯ ಹಬ್ಬವೆಂದು ಆಚರಿಸಲಾಯಿತು. ಬೆಳಗ್ಗಿನ ಪ್ರಮುಖ ದಿವ್ಯ ಬಲಿಪೂಜೆಯನ್ನು ನೆರವೇರಿಸಿದ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೀಡಿ, ದೈನಂದಿನ ಜವಾಬ್ದಾರಿಯನ್ನು ಪ್ರಾಮಾಣಿಕ ವಾಗಿ ನೆರವೇರಿಸಿ, ನಿರ್ಮಲ ಹೃದಯವಂತರಾಗಿ ದೇವರಿಗೆ ವಿಧೇಯರಾಗಿ ಬಾಳಿದಾಗ ಬದುಕಿನಲ್ಲಿ ಪಾವಿತ್ರ್ಯತೆಯನ್ನು ಗಳಿಸಲು ಸಾಧ್ಯ ಎಂದರು.

 ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಅದಾನಿ ಯುಪಿಸಿಎಲ್‌ನ ಕಿಶೋರ್ ಆಳ್ವ ಬಸಿಲಿಕಾಕ್ಕೆ ಭೇಟಿ ನೀಡಿದರು. ಕೊನೆಯ ದಿನದಂದು 10 ಬಲಿಪೂಜೆಗಳು ನಡೆದವು. ರಾತ್ರಿ 9.30ಕ್ಕೆ ಕೊನೆಯ ದಿವ್ಯ ಬಲಿಪೂಜೆ ನೆರವೇರಿತು.

ಆರು ಧರ್ಮಾಧ್ಯಕ್ಷರು ಮತ್ತು 400ಕ್ಕೂ ಹೆಚ್ಚು ಧರ್ಮಗುರುಗಳು ಭೇಟಿ ನೀಡಿ ಆಧ್ಯಾತ್ಮಿಕ ಸೇವೆಯನ್ನು ನೀಡಿದರು. ಬಸಿಲಿಕಾದ ನಿರ್ದೇಶಕ ವಂ.ಜೋರ್ಜ್ ಡಿಸೋಜ, ಸಹಾಯಕ ಧರ್ಮಗುರು ವಂ.ಜೆನ್ಸಿಲ್ ಆಳ್ವ ಸಹಕರಿಸಿದರು. ಈ ಬಾರಿ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News