×
Ad

ಮಹಿಳಾ ಶಿಕ್ಷಣಕ್ಕಾಗಿ ಮಾಚಿದೇವ ಒತ್ತು: ದಿನಕರ ಬಾಬು

Update: 2019-02-01 21:10 IST

ಉಡುಪಿ, ಫೆ.1: ಶಿಕ್ಷಣ ವ್ಯವಸ್ಥೆಯಲ್ಲಿ ಅಸಮಾನತೆ ತುಂಬಿದ್ದ ಅಂದಿನ ಕಾಲದಲ್ಲಿ ಮಹಿಳಾ ಶಿಕ್ಷಣಕ್ಕಾಗಿ ಒತ್ತು ಕೊಟ್ಟವರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಇವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀರಜಕ ಯಾನೆ ಮಡಿವಾಳ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಕಡಿಯಾಳಿಯ ಯು.ಕಮಲಾ ಬಾ ಪ್ರೌಢ ಶಾಲೆಯಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಶಾಸಕ ರಘುಪತಿ ಭಟ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜಯಂತಿಯನ್ನು ಶಾಲೆಗಳಲ್ಲಿ ಆಚರಿಸುವ ಮೂಲಕ ವಿದ್ಯಾರ್ಥಿಗಳು ಅವರ ವಿಚಾರಧಾರೆಗಳ ಕುರಿತು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ವ್ಯಕ್ತಿಗಳಿಂದ ಆ ಸಮಾಜಕ್ಕೆ ಹೆಚ್ಚು ಗೌರವ ಸಿಗುವಂತಾಗಿದೆ ಎಂದರು.

ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಸಮಾಜದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಬೇಕಾದರೆ ಅದು ಯುವ ಸಮುದಾಯದಿಂದಲೇ ಆಗಬೇಕು. ಬಸವಣ್ಣನವರ ನೇತೃತ್ವದಲ್ಲಿ ಶರಣರ ಚಳುವಳಿ ಆರಂಭಗೊಂಡಿದ್ದು, ಇವರ ವಿಚಾರಧಾರೆಗಳನ್ನು ಮಡಿವಾಳ ಮಾಚಿದೇವರ ವಚನಗಳಲ್ಲಿ ಕಾಣಬಹುದು ಎಂದರು.

ಸದ್ಯ ಮಡಿವಾಳ ಮಾಚಿದೇವರ 140 ಕ್ಕೂ ಅಧಿಕ ವಚನಗಳು ದೊರೆತಿದ್ದು, ಇವರ ತತ್ವ ಸಿದ್ದಾಂತಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸು ವಂತಾಗಬೇಕು. ಶತಮಾನಗಳ ಹಿಂದೆಯೇ ಸಮಾನತೆಯ ಆಶಯವನ್ನು ವಚನಗಳ ಮೂಲಕ ಪರಿಚಯಿಸಿದ ವ್ಯಕ್ತಿ ಮಡಿವಾಳ ಮಾಚಿದೇವ. ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ ಎಂದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿದರು. ಕಡಿಯಾಳಿ ಯು. ಕಮಲಾ ಬಾ ಪ್ರೌಢ ಶಾಲೆಯ ಆಡಳಿತ ಮಂಡಳಿ ಸದಸ್ಯ ಕೆ.ಅಣ್ಣಪ್ಪಶೆಣೈ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಚಂದ್ರ ಶೇಖರ್ ಸ್ವಾಗತಿಸಿ, ಶಾಲಾ ವಿದ್ಯಾರ್ಥಿಗಳಾದ ಧೀರಜ್, ಪ್ರಿಯ, ವಿನಾಯಕ್ ಕಾರ್ಯಕ್ರಮ ನಿರೂಪಿಸಿದರು. ರಜಕ ಯಾನೆ ಮಡಿವಾಳ ಸಂಘದ ಅಧ್ಯಕ್ಷ ಶಶಿರಾಜ್ ಕುಂದರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News