×
Ad

ಮಂಗಳೂರು ಧಕ್ಕೆಯಲ್ಲಿ ಮುಂದುವರಿದ ಮೀನುಗಾರರ ಧರಣಿ

Update: 2019-02-01 21:34 IST

ಮಂಗಳೂರು, ಫೆ. 1:ಲೈಟ್‌ಫಿಶಿಂಗ್ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆಯನ್ನು ತಡೆಹಿಡಿಯಬೇಕು ಎಂದು ಆಗ್ರಹಿಸಿ ಸಾಂಪ್ರದಾಯಿಕ ಮೀನುಗಾರರು ಆರಂಭಿಸಿರುವ ಧರಣಿ ಶುಕ್ರವಾರವೂ ನಡೆದಿದ್ದು, ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸಲು ನಿರ್ಧರಿಸಲಾಗಿದೆ.

ಈ ಮಧ್ಯೆ ಮೀನುಗಾರಿಕಾ ಇಲಾಖೆಯ ಕಚೇರಿಯಲ್ಲಿ ಉಪನಿರ್ದೇಶಕರ ಸಮ್ಮುಖದಲ್ಲಿ ಪರ್ಸಿನ್ ಮೀನುಗಾರರ ಸಂಘ, ಟ್ರಾಲ್‌ಬೋಟ್ ಮೀನುಗಾರರ ಸಂಘ, ಗಿಲ್‌ನೆಟ್ ಮೀನುಗಾರರ ಸಂಘ, ನಾಡದೋಣಿ ಮೀನುಗಾರರ ಸಂಘದ ಮುಖಂಡರು ಶುಕ್ರವಾರ ಸಭೆ ನಡೆಸಿದ್ದಾರೆ.

ಸದ್ಯ ಲೈಟ್‌ಫಿಶಿಂಗ್ ಬೋಟುಗಳ ಪೈಕಿ ಶೇ.20ರಷ್ಟು ಬೋಟ್‌ಗಳು ಮಾತ್ರ ಮೀನುಗಾರಿಕೆ ನಡೆಸಬೇಕು. ಆ ಪೈಕಿ ಮೀನುಗಾರಿಕೆ ನಡೆಸುವ ಬೋಟುಗಳು ಯಾವುದು ಎಂಬುದರ ಪಟ್ಟಿ ನೀಡಬೇಕು ಎಂದು ಉಪನಿರ್ದೇಶಕ ಚಿಕ್ಕವೀರ ನಾಯ್ಕಿ ಸೂಚಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪಟ್ಟಿ ನೀಡುವುದಾಗಿ ಪರ್ಸಿನ್ ಮೀನುಗಾರರ ಸಂಘದ ಮುಖಂಡರು ತಿಳಿಸಿದರು. ಈ ಮಧ್ಯೆ ಮೊನ್ನೆ ಲೈಟ್‌ಫಿಶಿಂಗ್‌ಗೆ ತೆರಳಿರುವ ಬೋಟುಗಳು ಮರಳಿ ಬರಲು ಸಭೆ ಒಪ್ಪಿಗೆ ನೀಡಿದೆ.

ಶುಕ್ರವಾರ ನಡೆದ ಸಭೆಯಲ್ಲಿ ಟ್ರಾಲ್‌ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ರಾಜೇಶ್ ಪುತ್ರನ್, ಇಬ್ರಾಹೀಂ ಬೆಂಗರೆ, ಪರ್ಸಿನ್ ಮೀನುಗಾರರ ಸಂಘದ ಮುಖಂಡರಾದ ಮೋಹನ್ ಬೆಂಗರೆ, ಮನೋಹರ ಬೋಳೂರು, ಬಾಬು ಬಂಗೇರಾ, ಗಿಲ್‌ನೆಟ್ ಸಂಘದ ಸುಭಾಷ್ ಕಾಂಚನ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News