ಮಧ್ಯಂತರ ಬಜೆಟ್: ಆಯುಷ್ಮಾನ್ ಭಾರತಕ್ಕೆ 6,400 ಕೋಟಿ ರೂ.

Update: 2019-02-01 16:48 GMT

ಹೊಸದಿಲ್ಲಿ,ಫೆ.1: ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಜಗತ್ತಿನ ಅತೀದೊಡ್ಡ ಆರೋಗ್ಯಸೇವೆ ಯೋಜನೆ ಎಂದು ಹೇಳಲಾಗುತ್ತಿರುವ ಆಯುಷ್ಮಾನ್ ಭಾರತ್ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡದಿದ್ದರೂ ಈ ಯೋಜನೆಗೆ ನಿಗದಿಪಡಿಸಲಾಗಿದ್ದ ನಿಧಿಯಲ್ಲಿ ಗಣನೀಯ ಏರಿಕೆ ಮಾಡಲಾಗಿದೆ.

ಕಳೆದ ವರ್ಷ ಆಯುಷ್ಮಾನ್ ಭಾರತ್‌ಗೆ 2,000 ಕೋಟಿ ರೂ. ಮೀಸಲಿಟ್ಟಿದ್ದರೆ ಮಧ್ಯಂತರ ಬಜೆಟ್‌ನಲ್ಲಿ ಈ ಮೊತ್ತವನ್ನು 6,400 ಕೊಟಿ ರೂ.ಗೆ ಏರಿಸಲಾಗಿದೆ. ಆದರೆ ಈ ಬೃಹತ್ ಮೊತ್ತದ ಲಾಭವನ್ನು ಖಾಸಗಿ ಕ್ಷೇತ್ರ ಪಡೆಯಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ವಿರೋಧ ಪಕ್ಷಗಳ ಸರಕಾರವಿರುವ ಹಲವು ರಾಜ್ಯಗಳು ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರಲು ನಿರಾಕರಿಸಿದ್ದು ತಮ್ಮದೇ ಆದ ಆರೋಗ್ಯ ಸೇವಾ ಯೋಜನೆಗಳನ್ನು ಪರಿಚಯಿಸಿವೆ. ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್‌ಗಡ ಮತ್ತು ದಿಲ್ಲಿಯಂಥ ರಾಜ್ಯಗಳು ಇನ್ನೂ ತಮ್ಮ ಒಪ್ಪಿಗೆ ಸೂಚಿಸಿಲ್ಲ.

ಹಾಗಾಗಿ ಈ ರಾಜ್ಯಗಳಿಗೆ ಕೇಂದ್ರ ನಿಧಿಯನ್ನು ಒದಗಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಗೆ ಎರಡು ಭಾಗಗಳಿವೆ. ಒಂದು ಕಡೆ ಈ ಯೋಜನೆಯಲ್ಲಿ ಭಾರತದ 10 ಕೋಟಿ ಕುಟುಂಬಗಳಿಗೆ 5 ಲಕ್ಷ ರೂ. ಆರೋಗ್ಯ ವಿಮೆ ನೀಡಲಾಗುತ್ತಿದ್ದರೆ ಇನ್ನೊಂದೆಡೆ 1.5 ಲಕ್ಷ ಉಪಕೇಂದ್ರಗಳನ್ನು ಆರೋಗ್ಯ ಮತ್ತು ಆರೈಕೆ ಕೇಂದ್ರಗಳಾಗಿ ಪರಿವರ್ತಿಸಲು ನಿಧಿಯನ್ನು ಮೀಸಲಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News