ಎಸ್.ಡಿ.ಪಿ.ಐ ವತಿಯಿಂದ ಬಾಬರಿ ಮಸೀದಿ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ ಕಾರ್ಯಕ್ರಮ

Update: 2019-02-01 17:33 GMT

ಉಳ್ಳಾಲ, ಫೆ. 1:  ಬ್ರಿಟೀಷರು ಹಿಂದೂಗಳ ಮತ್ತು ಮುಸಲ್ಮಾನರ ನಡುವೆ  ಬಿರುಕು ಮೂಡಿಸುವ  ಉದ್ದೇಶದಿಂದ  ಬಾಬರಿ ಮಸೀದಿಯಿರುವ ಜಾಗದಲ್ಲಿ ಶ್ರೀರಾಮ ಹುಟ್ಟಿದ್ದರೆಂಬ ವಿವಾದವನ್ನು ಸೃಷ್ಟಿಸಿದ್ದಾರೆ ಎಂದು  ಎಸ್ ಡಿಪಿಐ ರಾಜ್ಯಾಧ್ಯಕ್ಷ  ಇಲ್ಯಾಸ್ ಮಹಮ್ಮದ್ ತುಂಬೆ ಹೇಳಿದರು.

ಅವರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ  ವತಿಯಿಂದ  ಬಾಬರಿ ಮಸೀದಿ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ ಅನ್ನುವ  ಘೋಷಣೆಯೊಂದಿಗೆ  ಬಾಬರಿ ಮಸ್ಜಿದ್ ಎಕ್ಸ್ ಪೋ  ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ರಾಷ್ಟ್ರೀಯ ಅಭಿಯಾನ-2019ರ ಕರ್ನಾಟಕ ರಾಜ್ಯ  ಉದ್ಘಾಟನೆಯನ್ನು  ಉಳ್ಳಾಲ ಸೈಯ್ಯದ್ ಮದನಿ ದರ್ಗಾ  ಪ್ರಮುಖ ದ್ವಾರದಲ್ಲಿ  ಉದ್ಘಾಟಿಸಿ ಮಾತನಾಡಿದರು. 

ಬಾಬರಿ ಮಸೀದಿ ಮರಳಿ ಪಡೆಯುವ ಉದ್ದೇಶದಿಂದ ದೇಶದಾದ್ಯಂತ ಎಸ್ ಡಿಪಿಐ  ಒಂದು ತಿಂಗಳ ಅಭಿಯಾನ ಹಮ್ಮಿಕೊಂಡಿದೆ.  ಮಸೀದಿ ಸ್ಥಳವನ್ನು ಮರಳಿ ಬಿಡಲಾರೆವು ಉದ್ದೇಶದಿಂದ ಅಭಿಯಾನದ ರಾಜ್ಯದ ಆರಂಭ ಉಳ್ಳಾಲದಲ್ಲಿ  ನಡೆದಿದೆ.  ಬಾಬರಿ ಮಸೀದಿಯನ್ನು ಸಂಘಪರಿವಾರದ ಕಾರ್ಯಕರ್ತರು ಧ್ವಂಸ ನಡೆಸುವ ಮೂಲಕ ದೇಶದ ಜನರ ಸಾಂವಿಧಾನಿಕ, ರಾಜಕೀಯ, ಸಾಮಾಜಿಕ ಹಾಗೂ ಮೂಲಭೂತ ಹಕ್ಕುಗಳನ್ನು ಕಸಿಯಲಾಗಿದೆ. ಬಾಬರನ ದಂಡ ನಾಯಕ ಮೀರ್ ಬಾಕಿ ನಿರ್ಮಿಸಿದ ಮಸೀದಿ ಎಂಬುದು ಇತಿಹಾಸ ಹೇಳುತ್ತದೆ.  ಅದಕ್ಕೆ ಪೂರಕವಾದ ಎಲ್ಲಾ ದಾಖಲೆಗಳು ಇವೆ. ಆದರೆ ರಾಮ ಮಂದಿರಕ್ಕೆ ಬೇಕಾದ  ಯಾವುದೇ ದಾಖಲೆಗಳು ಅಲ್ಲಿಲ್ಲ.  368 ವರ್ಷಗಳ ನಂತರ 1857 ರ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭ  ಬ್ರಿಟೀಷರು ಹಿಂದೂಗಳ ಮತ್ತು ಮುಸಲ್ಮಾನರ ನಡುವೆ  ಬಿರುಕು ಮೂಡಿಸುವ  ಉದ್ದೇಶದಿಂದ  ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಎಂಬ ವಿವಾದವನ್ನು ಹುಟ್ಟು ಹಾಕುತ್ತಾರೆ. ಆನಂತರ 1949 ರ ಡಿ. 22 ರ ನಂತರ ಅಕ್ರಮವಾಗಿ ವಿಗ್ರಹಗಳನ್ನು ಇಟ್ಟುಕೊಂಡು ರಾಮ ಮಂದಿರವಿತ್ತು ಅನ್ನು ವ ಹುನ್ನಾರ ಆರಂಭವಾಯಿತು.  1986 ರಲ್ಲಿ ಕಾಂಗ್ರೆಸ್ ಸರಕಾರ ಬೀಗ ತೆಗೆದು ಪ್ರಾರ್ಥನೆಗೆ ಅವಕಾಶ ಕೊಡುತ್ತದೆ. ಬಳಿಕ ರಥಯಾತ್ರೆ, ಶಿಲನ್ಯಾಸ ಮಾಡುತ್ತಾ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುತ್ತಾರೆ. ಈ ಮೂಲಕ ದೇಶದ ಜನರನ್ನು ಇಬ್ಭಾಗ ಮಾಡಲಾಗಿದೆ. ಮಸೀದಿಯಿದ್ದ ಜಾಗದಲ್ಲಿ ನಮಾಝ್ ನಡೆಯಬೇಕಾಗಿತ್ತು. ಆದರೆ ಈಗ ಆರತಿ , ಅಕ್ಷತೆ ಪೂಜೆ ನಡೆಯುತ್ತಿದೆ. ದೇಶದಲ್ಲಿ ನ್ಯಾಯಪ್ರಿಯ, ಶಾಂತಿಪ್ರಿಯನಿಗೆ ಕೊಡುವ ನ್ಯಾಯ ವನ್ನು ಕಸಿದುಕೊಳ್ಳಲಾಗಿದೆ. ಮುಸಲ್ಮಾನರ ಹಕ್ಕು ಕಸಿಯುವ ಪ್ರಯತ್ನದ ಮೂಲಕ  ಇಡೀ ದೇಶಕ್ಕೆ ದ್ರೋಹವನ್ನು ಮಾಡಲಾಗಿದೆ.  ಇದೇ ವಿಚಾರದಲ್ಲಿ ರಾಜಕೀಯ ದುರುದ್ದೇಶಕ್ಕಾಗಿ ಬಿಜೆಪಿಯಿಂದಾಗಿ ದೇಶಾದ್ಯಂತ  ಜೀವಗಳು ಬಲಿಯಾಗಿವೆ. ಬಾಬರಿ ಮಸೀದಿ ಮತ್ತೆ ಕಟ್ಟಬೇಕಿದೆ. ಈ ಮೂಲಕ ದೇಶ ಬೆಳೆಯಬೇಕಿದೆ.  ನ್ಯಾಯಾಲಯ ಕೂಡಾ ಆಧಾರ ಸಹಿತ ತೀರ್ಪು ನೀಡಬೇಕಿದೇ ಹೊರತು, ಒತ್ತಡಗಳಿಗೆ ಮಣಿದು ತೀರ್ಪು ಪ್ರಕಟಿಸಬಾರದು ಎಂದರು. 

ಎಕ್ಸ್ ಪೋ ಕಾರ್ಯಕ್ರಮದಲ್ಲಿ ಎಸ್ ಡಿಪಿಐ ಬಾಬರಿ ಮಸೀದಿಗಾಗಿ ನಡೆಸಿದ ಹೋರಾಟದ , ಮಸೀದಿಯೇ ಇರುವ ಕುರಿತ ದಾಖಲೆಗಳ ಭಾವಚಿತ್ರ ಸಹಿತ ಅಲ್ಲಿ ನಡೆಯುತ್ತಾ ಬಂದಿರುವ ಘಟನೆಗಳ ಕುರಿತ ವೀಡಿಯೋ ಪ್ರದರ್ಶನವನ್ನು ಸಾರ್ವಜನಿಕರಿಗೆ ತೋರಿಸಿದರು. 

ಈ ಸಂದರ್ಭ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಜೋಕಟ್ಟೆ ಧ್ವಜಾರೋಹಣ ನೆರವೇರಿಸಿದರು.  ರಾಜ್ಯ ಕಾರ್ಯದರ್ಶಿಗಳಾದ  ಅಕ್ರಂ ಹಸನ್, ಅಶ್ರಫ್  ಮಾಚಾರ್,  ಉಳ್ಳಾಲ ನಗರಸಭೆ ಸದಸ್ಯರುಗಳಾದ  ರಮೀಝ್ ಕೋಡಿ, ಜಬ್ಬಾರ್,  ನಿಝಾಂ, ರವೂಫ್ ಉಳ್ಳಾಲ್,  ಅಸ್ಗರ್ ಅಲಿ,  ಬಶೀರ್, ಇಸ್ಮಾಯಿಲ್, ಇಕ್ಬಾಲ್ ಕೋಟೆಪುರ , ಸೈಯ್ಯಿದ್ ಮದನಿ  ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ,  ಹೊಸಪಲ್ಲಿ ಖತೀಬರಾದ  ಖತೀಬ್ ಯೂಸುಫ್ ಮಿಸ್ಬಾಹಿ,  ಅಬ್ಬಾಸ್ ಕಿನ್ಯಾ,  ಹನೀಫ್ ಕಾಟಿಪಳ್ಳ, , ಎ.ಆರ್ ಅಬ್ಬಾಸ್, ಅಶ್ರಫ್ ಜೋಕಟ್ಟೆ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News