ಯುವಜನ ವಿರೋಧಿ ಕೇಂದ್ರ ಬಜೆಟ್: ಡಿವೈಎಫ್‌ಐ
ಮಂಗಳೂರು, ಫೆ.1: ಶಿಕ್ಷಣ ಪಡೆದು ಉದ್ಯೋಗ ಸಿಗದೆ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿರುವ ಯುವಜನತೆಯನ್ನು ಬಜೆಟ್‌ನಲ್ಲಿ ಪರಿಗಣಿಸದಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಕರ್ನಾಟಕ ರಾಜ್ಯ ಸಮಿತಿಯು ಖಂಡಿಸಿದೆ.
ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂಬ ಪೊಳ್ಳು ಭರವಸೆಯಂತೆ ಈ ಬಜೆಟ್ ಮಂಡನೆ ಕೂಡ ಚುನಾವಣೆಯ ಗಿಮಿಕ್ ಆಗಿದೆ. ಇಂತಹ ಗಿಮಿಕ್‌ಗಳಿಂದ ಯುವಜನರನ್ನು ಮೋಸ ಮಾಡಲು ಇನ್ನು ಸಾಧ್ಯವಿಲ್ಲ. ವರ್ಷದಿಂದ ವರ್ಷಕ್ಕೆ ಕೋಟಿಗಟ್ಟಲೇ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ನಿರುದ್ಯೋಗಿಗಳಾಗುತ್ತಿದ್ದಾರೆ. 2017-18 ರ ನಿರುದ್ಯೋಗ ದರ 45ವರ್ಷಗಳಲ್ಲೆ ಅತಿ ಹೆಚ್ಚು ಎಂಬ ಆಘಾತಕಾರಿ ಅಂಶ ಬಯಲಾಗಿದ್ದರೂ ಬಜೆಟ್ಟಿನಲ್ಲಿ ಯುವಜನರಿಗೆ ಉದ್ಯೋಗದ ಕುರಿತು ಸಮರ್ಪಕ ಯೋಜನೆ-ಅನುದಾನ ನೀಡದೆ ಕೇಂದ್ರ ಬಿಜೆಪಿ ಸರಕಾರ ದ್ರೋಹಗೈದಿದೆ ಎಂದು ಡಿವೈಎಫ್‌ಐ ತಿಳಿಸಿದೆ.
ಕೇವಲ ನಾಮಕಾವಸ್ಥೆಗೆ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ತರಬೇತಿ ನೀಡುತ್ತೇವೆಂಬ ಬಜೆಟ್‌ನ ಅಂಶವು ನಿರುದ್ಯೋಗದ ಸಮಸ್ಯೆ ಎದುರಿಸುವ ಯುವಜನತೆಯನ್ನು ಅಣಕಿಸುವಂತಿದೆ. ಈ ಬಜೆಟ್ ದೇಶದ ಯುವಜನ ವಿರೋಧಿಯಾಗಿದೆ. ಯುವಜನತೆ ತಮ್ಮ ಬದುಕು ಕಟ್ಟಿಕೊಳ್ಳಲು ಪೂರಕ ಅಂಶಗಳಿರದ ಈ ಬಜೆಟ್ ಯುವಜನರ ಪಾಲಿಗೆ ಸಂಪೂರ್ಣ ನಿರಾಸೆದಾಯಕವಾಗಿದೆ. ಕೇಂದ್ರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ನೇತೃತ್ವದ ಎನ್‌ಡಿಎಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಯುವಜನತೆ ಸಜ್ಜಾಗಬೇಕಿದೆ ಎಂದು ಡಿವೈಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ.