ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಚಾರಣ
ಮಂಗಳೂರು, ಫೆ. 3: ದಕ್ಷಿಣ ಭಾರತದ ಸಕಲ ಜೀವ ಸಂಕುಲಗಳ ಬದುಕಿಗೆ ಚೇತನಾ ಶಕ್ತಿಯಾಗಿರುವ ಪಶ್ಚಿಮ ಘಟ್ಟವು ಪ್ರಪಂಚದ 18 ಸೂಕ್ಷ್ಮ ಜೀವ ವೈವಿಧ್ಯತೆ ಪ್ರದೇಶಗಳಲ್ಲಿ ಪ್ರಧಾನವಾದುದು. ನದಿಗಳ ಮೂಲಸ್ಥಾನ, ಶಿಖರ ಕಣಿವೆಗಳಲ್ಲಿರುವ ಶೋಲಾ ಕಾಡು, ನೀರನ್ನು ಇಂಗಿಸಿಕೊಳ್ಳುವ ಹುಲ್ಲುಗಾವಲು, ವನ್ಯಜೀಗಳೆಲ್ಲವೂ ಪಶ್ಚಿಮ ಘಟ್ಟದಲ್ಲಿದ್ದು ಇವು ಉಳಿದರೆ ಮಾತ್ರ ನಾಡು, ನಗರ ಉಳಿದೀತು ಎಂಬ ಆಶಯದೊಂದಿಗೆ ಮತ್ತು ಪಶ್ಚಿಮ ಘಟ್ಟದ ಸಂರಕ್ಷಣೆಯ ಸಲುವಾಗಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಪಶ್ಚಿಮ ಘಟ್ಟ ಅಧ್ಯಯನ ಚಾರಣವನ್ನು ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ -ಪಿ.ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಯೋಜಕ ಡಾ.ಮಹೇಶ್ ಕೆ.ಬಿ. ನೇತೃತ್ವದಲ್ಲಿ, ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ ಹೊಳ್ಳರ ಮಾರ್ಗದರ್ಶನದಲ್ಲಿ ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯ ಅಲೇಖಾನ್, ಹೊರಟ್ಟಿಯ ರಮಣ ಬೆಟ್ಟಕ್ಕೆ ಚಾರಣ ನಡೆಸಲಾಯಿತು.
36 ವಿದ್ಯಾರ್ಥಿಗಳ ತಂಡವನ್ನು ಕಾಡು, ಬೆಟ್ಟ ಸುತ್ತಾಡುತ್ತಾ ಮಳೆನೀರು ಪಶ್ಚಿಮ ಘಟ್ಟದಲ್ಲಿ ಇಂಗುವ ರೀತಿ, ನದಿ ಉಗಮವಾಗುವ ಮತ್ತು ವರ್ಷಪೂರ್ತಿ ಜೀವಂತವಾಗಿರಲು ಅಲ್ಲಿನ ಜೈವಿಕ ವ್ಯವಸ್ಥೆ, ಇರುವೆಯಿಂದ ಆನೆಯವರೆಗೆ, ಹುಲ್ಲಿನಿಂದ ಆಕಾಶದ ಎತ್ತರಕ್ಕೆ ಬೃಹತ್ ಮರಗಳವರೆಗೆ ಇರುವ ಅವಲಂಬನೆ, ಕಾಡ್ಗಿಚ್ಚುನಿಂದ ಆಗಲಿರುವ ಸಮಸ್ಯೆಗಳು, ಎಸ್ಟೇಟು, ರೆಸಾರ್ಟ್ ಮಾಫಿಯಾಗಳಿಂದ ಆಗುತ್ತಿರುವ ಕಿರುಕುಳಗಳು, ಅರಣ್ಯ ಅತಿಕ್ರಮಣದಿಂದ ಆಗುತ್ತಿರುವ ದುಷ್ಪರಿಣಾಮಗಳು, ಅರಣ್ಯ ಇಲಾಖೆಯ ಅಸಹಾಯಕ ಪರಿಸ್ಥಿತಿ ಇವೆಲ್ಲವನ್ನೂ ಚಾರಣದ ಉದ್ದಕ್ಕೂ ವಿವರಿಸಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯಲ್ಲಿ ತಮ್ಮ ಪಾತ್ರವೇನು ಎಂಬುದರ ಬಗ್ಗೆ ಮಾಹಿತಿ ನೀಡಲಾಯಿತು.
ಪಶ್ಚಿಮ ಘಟ್ಟದಿಂದ ನಾವೆಷ್ಟು ಉಪಯುಕ್ತತೆಯನ್ನು ಪಡೆದುಕೊಂಡಿದ್ದೇವೆ, ಪಶ್ಚಿಮ ಘಟ್ಟ ನಾಶವಾದರೆ ನಾವೆಷ್ಟು ತೊಂದರೆಗೆ ಒಳಗಾಗುವ ಪರಿಸ್ಥಿತಿ ನಿರ್ಮಾಣ ಆಗಬಹುದು ಎಂಬುದನ್ನು ವಿವರಿಸಿ ಪಶ್ಚಿಮ ಘಟ್ಟದ ಮೇಲೆ ಅಭಿಮಾನ, ಗೌರವ, ಕಾಳಜಿ ತೊಡಗಿಸಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭ ಕಾಲೇಜಿನ ಧೀರಜ್ ಕುಮಾರ್, ಪ್ರಭಾಕರ ಆಚಾರ್ಯ, ಗೋಪಿನಾಥ್ ಬಾಳಿಗಾ ಮತ್ತು ಗೀತಾಂಜಲಿ ಬಾಳಿಗಾ ಹಾಗೂ ದ.ಕ. ಜಿಲ್ಲಾ ವಿಪತ್ತು ನಿರ್ವಹಣೆ ಘಟಕದ ನಿತಿನ್, ಅಶ್ವಿನ್ ಕುಮಾರ್, ಅಭಿಷೇಕ್ ಬಿ.ಎನ್., ಗ್ಲೋರಿಯಾ ಡಿಸೋಜ ಉಪಸ್ಥಿತರಿದ್ದರು.