×
Ad

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ಬಿಡುಗಡೆ: ಶಾಸಕ ಸಂಜೀವ ಮಠಂದೂರು

Update: 2019-02-03 19:17 IST

ಪುತ್ತೂರು, ಫೆ. 3: ತಾನು ಶಾಸಕನಾಗಿ ಆಯ್ಕೆಯಾದ ಬಳಿಕ 10 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಅದನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಹಂಚಲಾಗಿದೆ. ಸುಮಾರು 4.5 ಕೋಟಿ ಅನುದಾನದಲ್ಲಿ ಈಗಾಗಲೇ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಕಾಮಗಾರಿಗಳು ಪೂರ್ಣಗೊಂಡಿದೆ. ಕೇಂದ್ರ ಸರಕಾರ, ರಾಜ್ಯ ಸರಕಾರ ಸೇರಿದಂತೆ ಎಲ್ಲಾ ಅನುದಾನಗಳಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕು. ಗ್ರಾಮೀಣ ರಸ್ತೆಗಳೂ ಕಾಂಕ್ರೀಟೀಕರಣಗೊಂಡು ಸರ್ವಋತು ರಸ್ತೆಯಾಗಿ ಮಾರ್ಪಾಡುಗೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಶಾಸಕರ, ಜಿ.ಪಂ, ತಾ.ಪಂ ಹಾಗೂ ಗ್ರಾ.ಪಂನ ಸುಮಾರು 1.50 ಕೋಟಿ ಅನುದಾನದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುತ್ತೂರು-ಉಪ್ಪಿನಂಗಡಿ ರಸ್ತೆಯ ಚತುಷ್ಪಥ ಕಾಮಗಾರಿಗೆ ಅಪೆಂಡಿಕ್ಸ್ ಯೋಜನೆಯಲ್ಲಿ ರೂ.12 ಕೋಟಿ ಅನುದಾನ ಮಂಜೂರುಗೊಂಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಇದರ ಕಾಮಗಾರಿಯು ಪ್ರಾರಂಭಗೊಳ್ಳಲಿದೆ. ಜನತೆಯ ಅಗತ್ಯತೆಗೆ ಅನುಗುಣವಾಗಿ ರಸ್ತೆಗಳೂ ಅಬಿವೃದ್ಧಿಯಾಗಬೇಕಾಗಿದ್ದು ಚತುಷ್ಪಥ ಕಾಮಗಾರಿಗೆ ಕೆಲವು ಕಡೆಗಳಲ್ಲಿ ಜಾಗದ ಆವಶ್ಯಕತೆ, ವಿದ್ಯುತ್ ಕಂಬಗಳ ಸ್ಥಳಾಂತರ, ನೀರಿನ ಪೈಪ್‍ಗಳ ಬದಲಾವಣೆ ಮೊದಲಾದ ಆವಶ್ಯಕತೆಗಳಿದ್ದು ನಾಗರೀಕರು ಕಾಮಗಾರಿಗೆ ಪೂರಕವಾದ ವಾತಾರಣವನ್ನು ಒದಗಿಸುವಂತೆ ಅವರು ವಿನಂತಿಸಿದರು.

ಜಿ.ಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಗ್ರಾಮದ ಜನತೆಯ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಶಾಸಕರು ಸಮಾನವಾಗಿ ಹಂಚುವ ಕಾರ್ಯ ನಡೆದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡ ಮಾತನಾಡಿ, ಗ್ರಾಮಸ್ಥರ ಹಲವು ಬೇಡಿಕೆಗಳನ್ನು ಈಡೇರಿಸಲು ಅನುದಾನ ಒದಗಿಸುವ ಮೂಲಕ ಶಾಸಕರು ಶೀಘ್ರವಾಗಿ ಸ್ಪಂಧಿಸಿದ್ದಾರೆ. ಅಲ್ಲದೆ ಜಿ.ಪಂ, ತಾ.ಪಂ ಹಾಗೂ ಪಂಚಾಯತ್‍ನ ಅನುದಾನ ಮೂಲಕ ಗ್ರಾಮದ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ಜಿ.ಪಂ ಸದಸ್ಯೆ ಶಯನಾ ಜಯಾನಂದ, ಮಾಜಿ ಸದಸ್ಯ ಕೇಶವ ಗೌಡ ಬಜತ್ತೂರು, ತಾ.ಪಂ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ, ಗ್ರಾ.ಪಂ ಉಪಾಧ್ಯಕ್ಷ ಬಾಬು ಗೌಡ ಭಂಡಾರದಮನೆ, ಸದಸ್ಯರಾದ ಭವ್ಯ, ಯಶೋಧ, ಭವಾನಿ, ಲಿಂಗಪ್ಪ ಹಾಗೂ ಪಿಡಿಓ ಚಿತ್ರಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮೋಹನ ಪಕ್ಕಳ ಕುಂಡಾಪು ಸ್ವಾಗತಿಸಿದರು. ಗ್ರಾ.ಪಂ ಸದಸ್ಯರಾದ ಮನೋಹರ್ ಗೌಡ ಡಿ.ವಿ ಕಾರ್ಯಕ್ರಮ ನಿರೂಪಿಸಿ, ರಾಮಚಂದ್ರ ಪೂಜಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News