×
Ad

ಸರಕಾರದ ಕೃಷಿ ಯೋಜನೆಗಳಿಗೆ ಏಕರೂಪದ ನೀತಿ ಅಗತ್ಯ: ಡಾ.ಟಿ.ಎಚ್.ಗೌಡ

Update: 2019-02-03 20:23 IST

ಉಡುಪಿ, ಫೆ.3: ಕೃಷಿ ಮಾಡುವವರೆಲ್ಲರೂ ಕೃಷಿಕರೇ ಆಗಿದ್ದಾರೆ. ಅವರಿಗೆ ಏಕರೂಪವಾದ ನೀತಿಗಳನ್ನು ಸರಕಾರ ರೂಪಿಸದೆ ಇರುವುದು ದೊಡ್ಡ ಹೊಡೆತ ವಾಗಿದೆ. ಸರಕಾರಗಳು ಜಾರಿಗೆ ತರುವ ಎಲ್ಲ ಯೋಜನೆಗಳು ಎಲ್ಲ ರೈತರಿಗೂ ಸಿಗುತ್ತಿಲ್ಲ. ಈ ತಾರತಮ್ಯ ಹೋಗಲಾಡಿಸಲು ರೈತರು ಒಗ್ಗಟ್ಟಾಗಬೇಕು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ಕೃಷಿ ವಿಸ್ತರಣಾ ನಿದೇಶರ್ಕ ಡಾ.ಟಿ.ಎಚ್.ಗೌಡ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪದ ಆವಣದಲ್ಲಿ ರವಿವಾರ ಆಯೋಜಿಸಲಾದ ಕೃಷಿ ಮಾಹಿತಿ ಶಿಬಿರ ಮತ್ತು ವಸ್ತು ಪ್ರದರ್ಶನ ‘ಜಿಲ್ಲಾ ರೈತ ಸಮಾವೇಶ’ವನ್ನು ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯ ಸರಕಾರದ ಸಾಲ ಮನ್ನಾ ಯೋಜನೆ ಎಲ್ಲರಿಗೂ ಸಿಗುವುದಿಲ್ಲ. ಅದರಲ್ಲೂ ಸಣ್ಣ ಹಾಗೂ ದೊಡ್ಡ ರೈತರೆಂಬ ಪ್ರತ್ಯೇಕತೆ ಮಾಡಲಾಗಿದೆ. ಅದೇ ರೀತಿ ಕೇಂದ್ರ ಸರಕಾರ ಬಜೆಟ್‌ನಲ್ಲಿ ರೈತರಿಗೆ ಸಾಕಷ್ಟು ಯೋಜನೆಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ಕೆಲವರಿಗೆ ಅನುಕೂಲವಾದರೆ ಕೆಲವರಿಗೆ ಆಗಲ್ಲ. ಇಂತಹ ತಾರತಮ್ಯ ಹೋಗಲಾಡಿ ಸಬೇಕು. ಅದಕ್ಕಾಗಿ ರೈತರು ಒಗ್ಗಟಾಗಬೇಕು ಎಂದರು.

ಹಲವು ವರ್ಷಗಳ ರೈತರ ಸಮಸ್ಯೆಗಳನ್ನು ಬಗೆಹರಿಸಲು ಈವರೆಗೆ ಸಾಧ್ಯ ವಾಗಿಲ್ಲ. ಇದಕ್ಕೆ ಸರಕಾರ, ಪ್ರಕೃತಿ, ಸಾಮಾಜಿಕ ನಿಲುವುಗಳು ಕಾರಣ. ಪ್ರಾಕೃತಿಕ ವಿಕೋಪಗಳ ಮಧ್ಯೆ ನಾವು ಕೃಷಿ ಮಾಡಬೇಕಾದ ಸ್ಥಿತಿ ಇಂದು ನಿರ್ಮಾಣ ವಾಗಿದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳು ರೈತರ ಬದುಕನ್ನು ಕಷ್ಟದಲ್ಲಿ ಸಿಲುಕಿಸುತ್ತಿವೆ. ಅದಕ್ಕೆ ಪೂರಕವಾಗಿ ರೈತರು ಹೊಂದಿಕೊಂಡು ಪ್ರಗತಿ ಸಾಧಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಗೇರು ಬೀಜ ಬೆಳೆಯಲ್ಲಿ ತಂತ್ರಜ್ಞಾನ ಅಳವಡಿಕೆ ಕಡಿಮೆ ಇದ್ದು, ಅದನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸುವ ಕಾರ್ಯ ಮಾಡಲಾಗುತ್ತಿದೆ. ಆರ್ಥಿಕ ಬೆಳೆಯಾಗಿರುವ ಗೋಡಂಬಿ ಇಳುವರಿ ಮಟ್ಟವನ್ನು ಒಂದು ಮರದಿಂದ ನಾಲ್ಕರಿಂದ 8-10ಕೆ.ಜಿ.ಗೆ ಏರಿಸಲು ಬೇಕಾದ ಹಲವು ತಂತ್ರಜ್ಞಾನವನ್ನು ಒದಗಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಯುವ ಜನತೆಯಲ್ಲಿ ಕೃಷಿ ಬಗ್ಗೆ ಆಸಕ್ತಿ ಕಡಿಮೆ ಆಗಲು ಸರಕಾರದ ನೀತಿಗಳು ಕಾರಣವಾಗಿವೆ. ಕೃಷಿಕರ ಉತ್ಪಾದನೆಗೆ ನಿರ್ದಿಷ್ಟವಾದ ಬೆಲೆ ಸಿಗುತ್ತಿಲ್ಲ. ಕೃಷಿಕರ ಬೆಳೆಗಳಿಗೆ ಮಧ್ಯವರ್ತಿಗಳೆ ಬೆಲೆಯನ್ನು ನಿಗದಿ ಮಾಡುತ್ತಿದ್ದಾರೆ. ಇದರಿಂದ ಬಳಕೆದಾರರಿಗೂ ಬೆಳೆಗಾರರಿಗೂ ಯಾವುದೇ ಲಾಭ ಇಲ್ಲ. ಅದರ ಬದಲು ತಮ್ಮ ಬೆಳೆಗಳಿಗೆ ತಾವೇ ಬೆಲೆ ನಿಗದಿಪಡಿಸಲು ಸ್ವಸಹಾಯ ಸಂಘ, ಉತ್ಪಾದನಾ ಕಂಪೆನಿಗಳನ್ನು ರೈತರೇ ಮಾಡಿಕೊಳ್ಳಬೇಕು. ಕೃಷಿಯಲ್ಲಿನ ನಷ್ಟವನ್ನು ದೂರ ಮಾಡಲು ಎಲ್ಲರೂ ಸಮಗ್ರ ಕೃಷಿ ಪದ್ಧತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೃಷಿಕರಾದ ನಾರಾಯಣ ಉಡುಪ ಬೈಲೂರು, ಜಯ ಲಕ್ಷ್ಮೀ ಆಚಾರ್ಯ ಬೈಲೂರು, ಜೆರೂಮ್ ಕೆಸ್ತಲಿನೋ ಪಾಂಬೂರು, ದಯಾ ನಂದ ಸುವರ್ಣ ಮಣಿಪುರ, ಪ್ರಕಾಶ್ ಶೆಟ್ಟಿ ಪೆರ್ಡೂರು, ದಯಾನಂದ ಗಾಣಿಗ ಗುಡ್ಡೆಯಂಗಡಿ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ವಹಿಸಿದ್ದರು. ರೋಟರಿ ಸಾರ್ವಜನಿಕ ಸಂಪರ್ಕ ಜಿಲ್ಲಾಧ್ಯಕ್ಷ ಮಂಜುನಾಥ ಉಪಾಧ್ಯ, ವಿಜಯಾ ಬ್ಯಾಂಕ್ ಉಡುಪಿ ವಲಯ ಪ್ರಾದೇಶಿಕ ಪ್ರಬಂಧಕ ಕೆ.ಆರ್. ರವಿಚಂದ್ರನ್ ಮುಖ್ಯ ಅತಿಥಿಗಳಾಗಿದ್ದರು
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ವರದಿ ಮಂಡನೆ ಮಾಡಿದರು. ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾ ಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗ, ಕೋಶಾಧಿಕಾರಿ ಪಾಂಡುರಂಗ ನಾಯಕ್ ವಂದಿಸಿ ದರು. ನಿರ್ಮಲಾ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟ ಮಳಿಗೆ, ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ಕೃಷಿ ಸಂಬಂಧಿ ಪುಸ್ತಕಗಳ ಮಾರಾಟ ಹಾಗೂ ಪ್ರದರ್ಶನ ವನ್ನು ಏರ್ಪಡಿಸಲಾಗಿತ್ತು.

ಹೊಸ ಭತ್ತದ ತಳಿಗಳ ಸಂಶೋಧನೆ

ಬದಲಾಗುತ್ತಿರುವ ಇಂದಿನ ವಾತಾವರಣದಲ್ಲಿ ರೈತರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಈಗಾಗಲೇ ಹಲವು ಸಂಶೋಧನೆಗಳನ್ನು ನಡೆಸಲಾಗಿದೆ. 25 ವರ್ಷಗಳ ಹಿಂದೆ ಸಂಶೋಧಿಸಲಾದ ಎಂಓ 4 ಭತ್ತದ ತಳಿ ಕರಾವಳಿ ಭಾಗದ ರೈತರ ಸಮಸ್ಯೆಗಳಿಗೆ ಉತ್ತರವಾಗಿದೆ. ಅದೇ ರೀತಿ ಇರ್ಗ, ಎಂಓ 21 ಸೇರಿದಂತೆ ಮೂರು ಭತ್ತದ ತಳಿಗಳನ್ನು ಸಂಶೋಧನೆಯ ಮೂಲಕ ಬಿಡುಗಡೆ ಮಾಡುವ ಹಂತದಲ್ಲಿದ್ದೇವೆ ಎಂದು ಡಾ.ಟಿ.ಎಚ್.ಗೌಡ ತಿಳಿಸಿದರು.

ಮಳೆ ವಿಳಂಬವಾಗಿ ನೀರಿನ ಪ್ರಮಾಣ ಕಡಿಮೆಯಾದರೂ ಹೊಂದಿಕೊಂಡು ಬೆಳೆಯುವ ಭತ್ತದ ತಳಿಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಕರಾವಳಿಯ ಸಾಂಸ್ಕೃತಿಕ ಬೆಳೆಯಾಗಿರುವ ಭತ್ತವನ್ನು ಉಳಿಸಿ ಕೊಳ್ಳಲು, ಕಾರ್ಮಿಕರ ಕೊರತೆ ನಿಗೀಸಲು ಹಾಗೂ ವೆಚ್ಚ ಕಡಿಮೆ ಮಾಡಲು ಹೆಚ್ಚು ಹೆಚ್ಚು ತಂತ್ರಜ್ಞಾನಗಳನ್ನು ಬಳಕೆ ಮಾಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News