×
Ad

ಉದ್ಯೋಗ ಯುವಜನತೆಯ ಬದುಕಿಗೆ ದಾರಿದೀಪ: ಡಾ.ಜಯಮಾಲ

Update: 2019-02-03 20:25 IST

ಉಡುಪಿ, ಫೆ.3: ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಟಾನ ಹಾಗೂ ಕೋಟತಟ್ಟು ಗ್ರಾಪಂ ಆಶ್ರಯದಲ್ಲಿ ಫೆ.24ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ‘ಭರವಸೆ’ ಇದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ರವಿವಾರ ಉಡುಪಿ ಪ್ರವಾಸಿ ಮಂದಿರದಲ್ಲಿ ಜರಗಿತು.

ಪೋಸ್ಟರ್ ಬಿಡುಗಡೆಗೊಳಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಉದ್ಯೋಗ ಎಂಬುದು ಇಂದಿನ ಬಹಳ ಅಗತ್ಯವಾಗಿದೆ. ಉದ್ಯೋಗ ಎಂಬುದು ಯುವಜನತೆಯ ಬದುಕಿಗೆ ದಾರಿದೀಪ ಆಗಿದೆ. ಆದುದರಿಂದ ಯುವಜನತೆ ಇಂತಹ ಸುವರ್ಣ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ ಭರವಸೆಯನ್ನು ಈಡೇರಿಸಿಕೊಳ್ಳ ಬೇಕು ಎಂದು ತಿಳಿಸಿದರು.

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಸರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಲಾಗಿದೆ. ಇದರೊಂದಿಗೆ ಉದ್ಯೋಗದ ಭರವಸೆಯನ್ನು ಕೂಡ ನೀಡಲಾಗುತ್ತಿದೆ. ಪದವೀಧರರು ಮಾತ್ರವಲ್ಲದೆ ಕೆಲಸ ಇಲ್ಲದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೂಡ ಈ ತರಬೇತಿಯನ್ನು ಪಡೆ ಯುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಗೀತಾಂಜಲಿ ಸುವರ್ಣ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಪ್ರಭು ತಿಂಗಳಾಯ ಉಪಸ್ಥಿತರಿದ್ದರು.

ಮೇಳದ ಸಂಚಾಲಕ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ವಾಗತಿಸಿದರು. ಆಪ್ತಕಾರ್ಯದರ್ಶಿ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಈ ಉದ್ಯೋಗ ಮೇಳವು ಜಿಲ್ಲಾಡಳಿತ, ಉದ್ಯೋಗ ಮತ್ತು ಕೌಶಲ್ಯಾ ಭಿವೃದ್ಧಿ ಇಲಾಖೆ, ಕೈಗಾರಿಕಾ ಮತ್ತು ಉದ್ಯೋಗ ತರಬೇತಿ ಇಲಾಖೆ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯ ಸಹಯೋಗದೊಂದಿಗೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಫೆ.17ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಉದ್ಯೋಗ ಆಕಾಂಕ್ಷಿಗಳಿಗೆ ಸಂದರ್ಶನ ಎದುರಿಸುವ ಕುರಿತು ತರಬೇತಿ ಕಾರ್ಯಾಗಾರವನ್ನು ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News