ಅರೆ ಭಾಷೆ ಹೃದಯವನ್ನು ಒಂದಾಗಿಸುವ ಕೆಲಸ ಮಾಡಿದೆ: ಶಾಸಕ ಸಂಜೀವ ಮಠಂದೂರು
ಪುತ್ತೂರು, ಫೆ. 3: ಅರೆಭಾಷೆ ತನ್ನದೇ ಆದ ಛಾಪನ್ನು ಮೂಡಿಸುತ್ತಾ ಬೆಳೆದು ಬಂದಿದ್ದು, ನಮ್ಮ ಭೌಗೋಳಿಕ ಆಚಾರ ವಿಚಾರಗಳನ್ನು ತೋರಿಸುವುದರ ಜೊತೆಗೆ ಹೃದಯ ಹೃದಯವನ್ನು ಒಟ್ಟು ಮಾಡುವ ಕೆಲಸ ಮಾಡಿದೆ. ವೀರ ಸೇನಾನಿಯಿಂದ ಹಿಡಿದು ರೈತಾಪಿ ವರ್ಗದವರೆಲ್ಲಾ ಅರೆಭಾಷೆಯ ಜೀವನಾಡಿಯಾಗಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ರವಿವಾರ ಕರ್ನಾಟಕ ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ವತಿಯಿಂದ ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘಗಳ ಸಹಯೋಗದಲ್ಲಿ ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗೆ ಸಮುದಾಯ ಭವನದಲ್ಲಿ ನಡೆದ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ -2018 ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರೂ ಅಕಾಡೆಮಿ ಮಾಜಿ ಸದಸ್ಯರೂ ಆಗಿರುವ ಮೋಹನ್ ಗೌಡ ಇಡ್ಯಡ್ಕ ಅವರು ಮಾತನಾಡಿ ಅರೆಭಾಷೆಯನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಅಕಾಡೆಮಿ ಮೂಲಕ ಆಗುತ್ತಿದೆ. ಗೌಡ ಸಮಾಜದ ಸಂಸ್ಕ್ರತಿ, ಸಂಸ್ಕಾರ ಉಳಿಸುವ ಕೆಲಸವನ್ನೂ ಅಕಾಡೆಮಿಯ ಮೂಲಕ ನಡೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪಿ.ಸಿ. ಜಯರಾಮ್ ಮಾತನಾಡಿ ಅಕಾಡೆಮಿಯ ಪ್ರಯತ್ನದ ಫಲವಾಗಿ ಕಳೆದ ವರ್ಷದಿಂದ ಮಂಗಳೂರು ವಿವಿ ಪದವಿ ಪಠ್ಯದಲ್ಲಿ ಟಿ.ಜಿ ಮುಡೂರು, ಕುತ್ಯಾಳ ನಾಗಪ್ಪ ಗೌಡ ಅವರ ಅರೆಭಾಷಾ ಪದ್ಯ ಸೇರ್ಪಡೆಯಾಗಿದೆ. ಯಕ್ಷಗಾನ, ನಾಟಕ, ಅಧ್ಯಯನ ಪೀಠ, ಈಗಾಗಲೆ ಮಡಿಕೇರಿ ಆಕಾಶವಾಣಿಯಲ್ಲಿ ಬರುವ ಅರೆಭಾಷೆ ಕಾರ್ಯಕ್ರಮ ಮುಂದೆ ಮಂಗಳೂರು ಆಕಾಶವಾಣಿಯಲ್ಲೂ ಮೂಡಿಬರಬೇಕು ಎಂಬ ಉದ್ದೇಶದಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಮ್ಮ ಅವಧಿಯಲ್ಲಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದೇವೆ ಎಂದ ಅವರು ಅರೆಭಾಷೆಯಲ್ಲಿ ಫಿಲೋಶಿಫ್‍ಗಳು ಆಗಬೇಕೆಂಬ ನಿಟ್ಟಿನಲ್ಲಿ ಪ್ರಬಂದ ಮಂಡನೆಗೆ ಈಗಾಗಲೆ 10 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಮಾತನಾಡಿ ರಾಜ್ಯದ ಬೇರೆ ಬೇರೆ ಜನರು ಆಡುವ ಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ 13ರಷ್ಟು ಅಕಾಡೆಮಿ ಸ್ಥಾಪನೆ ಆಗಿದೆ. ಪ್ರತಿಯೊಂದು ಬಾಷೆಯಲ್ಲೂ ಅದರದ್ದೆ ಆದ ಸಂಸ್ಕಾರ, ಸಂಸ್ಕೃತಿ ಇದೆ. ಅದನ್ನು ದಾಖಲೆ ಮತ್ತು ಸಂಶೋಧನೆ ಮಾಡುವ ಮತ್ತು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಕಾಡೆಮಿಯ ಮೂಲಕ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸುಳ್ಯದ ಪ್ರೊ. ಕೋಡಿ ಕುಶಾಲಪ್ಪ ಗೌಡ(ಸಾಹಿತ್ಯ), ಶಿಕ್ಷಣ ತಜ್ಞ ಪುತ್ತೂರಿನ ಡಾ. ಎನ್. ಸುಕುಮಾರ ಗೌಡ (ಅಧ್ಯಯನ ಹಾಗೂ ಸಂಶೋಧನೆ), ಮಡಿಕೇರಿಯ ಕಾಳೆಯಂಡ ತಂಗಮ್ಮ ಅಪ್ಪಚ್ಚ (ಅರೆಭಾಷೆ ಸಂಸ್ಕೃತಿ) ಅವರಿಗೆ 2018ನೇ ಸಾಲಿನ ಅಕಾಡಮಿ ಗೌರವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಸನ್ಮಾನಿತರ ಕುರಿತು ಅಭಿನಂದನಾ ಭಾಷಣ ಮಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ಸನ್ಮಾನ ಸ್ವೀಕರಿಸಿದ ಪ್ರೊ. ಕೋಡಿ ಕುಶಾಲಪ್ಪ ಗೌಡ, ಡಾ. ಎನ್.ಸುಕುಮಾರ ಗೌಡ, ಕಾಳೆಯಂಡ ತಂಗಮ್ಮ ಅಪ್ಪಚ್ಚು ಮಾತನಾಡಿ ಶುಭ ಹಾರೈಸಿದರು.
ಅಕಾಡೆಮಿಯ ಸದಸ್ಯರಾದ ಎ.ಕೆ.ಹಿಮಕರ, ಚಿದಾನಂದ ಬೈಲಾಡಿ, ಕಡ್ಲೇರ ತುಳಸಿ ಮೋಹನ್, ಒಕ್ಕಲಿಗ ಗೌಡ ಸೇವಾ ಸಂಘದ ಪದಾಧಿಕಾರಿಗಳಾದ ಸುರೇಶ್ ಗೌಡ, ಮೀನಾಕ್ಷಿ, ಗೀತಾ, ಜನಾರ್ದನ, ಶಿವರಾಮ್, ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ ಗೌಡ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್, ಮಹಿಳಾ ಗೌಡ ಸಂಘದ ಅಧ್ಯಕ್ಷ ನೇತ್ರಾವತಿ ಪಿ ಗೌಡ, ಯುವ ಗೌಡ ಸಂಘದ ಅಧ್ಯಕ್ಷ ರಾಧಾಕೃಷ್ಣ ನಂದಿಲ, ಅಕಾಡೆಮಿ ಸದಸ್ಯರಾದ ಮಾಧವ ಗೌಡ ಬೆಳ್ಳಾರೆ, ತಿರುಮಲೇಶ್ವರಿ, ಪರಶುರಾಮ ಚಿಲ್ತಡ್ಕ, ದೇವರಾಜ್, ಬಾರಿಯಂಡ ಜೋಯಪ್ಪ, ಶ್ವೇತಾ ಮಡಪ್ಪಾಡಿ, ಸುರೇಶ್ ಎಂ.ಹೆಚ್, ಕುಂಬುಗೌಡನ ಪ್ರಸನ್ನ, ಕಾನೆಹಿತ್ಲು ಮೊಣ್ಣಪ್ಪ, ದಿನೇಶ್ ಪಾಲೆಮಜಲು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಯತೀಶ್ ಕುಮಾರ್ ಗೌಡ ಸ್ವಾಗತಿಸಿ, ವಂದಿಸಿದರು. ಅಕಾಡೆಮಿ ಸದಸ್ಯ ಕೆ.ಟಿ.ವಿಶ್ವನಾಥ, ಗೀತಾ ಜಯರಾಮ್, ಸಂಧ್ಯಾ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು.