ಬಿಜೆಪಿಗೆ ಕಾಂಗ್ರೆಸ್ ಮುಗಿಸುವುದೇ ಸಿದ್ಧಾಂತವಾಗಿ: ದಿನೇಶ್ ಗುಂಡುರಾವ್

Update: 2019-02-03 15:12 GMT

ಪಡುಬಿದ್ರಿ, ಫೆ. 3: ಬಿಜೆಪಿಗೆ ಕಾಂಗ್ರೆಸ್ಸನ್ನು ಮುಗಿಸುವುದೇ ಅವರ ಸಿದ್ಧಾಂತವಾಗಿಬಿಟ್ಟಿದೆ. ಇದನ್ನೆಲ್ಲಾ ಕಾಂಗ್ರೆಸ್ ಮೀರಿ ನಿಲ್ಲುವಂತಾಗಲು ಕಾಂಗ್ರೆಸ್ ಸೇವಾದಳ, ಸೇವಾದಳದ ಯೂಥ್‍ಬ್ರಿಗೇಡ್ ಹಾಗೂ ಸೇವಾದಳದ ಮಹಿಳಾ ಘಟಕಗಳು ಇನ್ನಷ್ಟು ಬಲಿಷ್ಟವಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ರವಿವಾರ ಎರ್ಮಾಳಿನ ರಾಜೀವ್ ಗಾಂಧಿ ಎಕಾಡೆಮಿ ಫಾರ್ ಪೊಲಿಟಿಕಲ್ ಸ್ಟಡೀಸ್ ಸಭಾಂಗಣದಲ್ಲಿ ರಾಜ್ಯ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರ ತರಬೇತಿ ಕಾರ್ಯ ಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಆರ್ಥಿಕ ಶಿಸ್ತು, ಸಾಮಾಜಿಕ ನ್ಯಾಯಗಳ ಪ್ರತಿಪಾದನೆ ಅಗತ್ಯ ಎಂಬುದಾಗಿ ಗಾಂಧೀಜಿ ಪ್ರತಿಪಾದಿಸಿದ್ದರು. ಇದರ ವಿರುದ್ಧವಾಗಿ ಬಿಜೆಪಿ ನಡವಳಿಕೆಗಳು ಇಂದು ನಮಗೆ ತೋರಿಬರುತ್ತವೆ. ತಮ್ಮ ಕಾರ್ಯಲಾಭಕ್ಕಾಗಿ ಪ್ರಚೋದನೆಯ ನೀತಿಯನ್ನು ಬಿಜೆಪಿ ಇಂದು ಅನುಸರಿಸುತ್ತಿದೆ.  ದೇಶದ ಸುಭದ್ರ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರ ಅಗತ್ಯವಿದೆ. ಆಗ ಮಾತ್ರ ಜಾತ್ಯಾತೀತ ನೆಲೆಯಲ್ಲಿ ಭಾರತದ ಏಳಿಗೆ ಸಾಧ್ಯವಿದೆ ಎಂದರು.

ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ`ಸೋಜ ಮಾತನಾಡಿದರು. ವೇದಿಕೆಯಲ್ಲಿ ರಾಜಕೀಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಪ್ಯಾರಿ ಜಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎ. ಗಫೂರ್, ಜಿ. ಎ. ಬಾವ, ಎಐಸಿಸಿ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ರಾಕೇಶ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನವೀನ್‍ಚಂದ್ರ ಜೆ.ಶೆಟ್ಟಿ, ಸತ್ಯನ್ ಪುತ್ತೂರು, ಪ್ರತಿಭಾ, ನವೀನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಸೇವಾದಳದ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅರ್ಜುನ್ ಗೌಡ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯ ಸೇವಾದಳದ ಉಪಾಧ್ಯಕ್ಷ ಗೋಪಾಲೇ ಗೌಡ ವಂದಿಸಿದರು.

ನಿಗಮ, ಮಂಡಳಿಗಳಲ್ಲಿ ಸೇವಾದಳಕ್ಕೆ ಸ್ಥಾನ

ನಿಗಮ ಹಾಗೂ ಮಂಡಗಳಿಗಳಲ್ಲಿ ಕಾಂಗ್ರೆಸ್ ಸೇವಾದಳದಲ್ಲಿ ಉತ್ತಮ ಸೇವೆ ನೀಡುವ 10 ಕಾರ್ಯಕರ್ತರಿಗೆ ರಾಜ್ಯದ ವಿವಿಧ ನಿಗಮ, ಮಂಡಳಿಗಳಲ್ಲಿ ಸ್ಥಾನವನ್ನು ಕಾಂಗ್ರೆಸ್ ಮೀಸಲಿರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದರು. 10ಮಂದಿಯ ಪಟ್ಟಿಗಳನ್ನು ನೀಡುವಂತೆ ಅವರು ಸೇವಾದಳದ ಅಧ್ಯಕ್ಷರಿಗೆ ಸೂಚಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News