ಮಸೀದಿ ಕೆಡವಿ ದೇವಸ್ಥಾನ ನಿರ್ಮಾಣ ಹೇಳಿಕೆ: ಕ್ರಮಕ್ಕೆ ಮುಸ್ಲಿಂ ಲೀಗ್ ಆಗ್ರಹ
ಮಂಗಳೂರು, ಫೆ.3: ದೇಶದಲ್ಲಿನ 40,000 ಮಸೀದಿಗಳನ್ನು ಕೆಡವಿ ದೇವಾಲಯಗಳನ್ನು ನಿರ್ಮಿಸುವ ಕುರಿತ ಪ್ರಚೋದನಾತ್ಮಕ ಹೇಳಿಕೆ ನೀಡಿದ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್ ಗೌಡ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳಲು ಅಖಿಲ ಭಾರತ ಮುಸ್ಲಿಂ ಲೀಗ್ ಆಗ್ರಹಿಸಿ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರಿಗೆ ಮನವಿ ಸಲ್ಲಿಸಿತು.
ಪ್ರಚೋದನಾತ್ಮಕ ಹೇಳಿಕೆಗಳಿಂದ ಯುವ ಸಮಾಜಕ್ಕೆ ಮುಸ್ಲಿಮರ ವಿರುದ್ಧ ತಪ್ಪು ಭಾವನೆ ಮೂಡುವಂತಾಗುತ್ತದೆ. ಜೊತೆಗೆ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿ ಹಿಂದೂ ಯುವಕರಲ್ಲಿ ಕೋಮು ದ್ವೇಷ ಬಿತ್ತುವ ಹುನ್ನಾರವು ಆತನ ಹೇಳಿಕೆಯಲ್ಲಿ ಅಡಗಿದೆ. ಈ ವಿವಾದಾತ್ಮಹ ಹೇಳಿಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲ ಧರ್ಮೀಯರಿಗೂ ತಮ್ಮ ಧಾರ್ಮಿಕ ನೀತಿಯಂತೆ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಭವ್ಯ ಭಾರತವನ್ನು ಹಿಂದೂ ರಾಷ್ಟ್ರ ನಿರ್ಮಾಣದ ತುರ್ತು ಅವಶ್ಯ ಹೇಳಿಕೆಯು ಸಂವಿಧಾನ ವಿರೋಧಿ ಹಾಗೂ ಅಪಾಯಕಾರಿಯಾಗಿದೆ. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್ ಗೌಡ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು ಮುಸ್ಲಿಂ ಲೀಗ್ ಆಗ್ರಹಿಸಿತು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಸ್ವಾಗತಕಾರಿಯಾಗಿದೆ. ಅದಕ್ಕೆ ಸವಾಲಾಗಿ ಸಂಘಪರಿವಾರಕ್ಕೆ ಪೊಲೀಸರ ಸಲಹೆ ಬೇಡ ಎನ್ನುವುದು ಕಾನೂನಿಗೆ ಅಗೌರವ ತೋರಿಸಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಅಖಿಲ ಭಾರತ ಮುಸ್ಲಿಂ ಲೀಗ್‌ನ ರಾಜ್ಯ ಉಪಾಧ್ಯಕ್ಷ ಸಿ.ಅಹ್ಮದ್ ಜಮಾಲ್, ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಇಸ್ಮಾಯೀಲ್, ಮುಖಂಡರಾದ ಶರೀಫ್, ರಿಯಾಝ್, ಇಮ್ತಿಯಾಝ್ ಎ.ಆರ್. ಉಪಸ್ಥಿತರಿದ್ದರು.