×
Ad

ದಲಿತ ಯುವತಿಯ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಶೀಘ್ರ ಜಾಮೀನು

Update: 2019-02-03 20:50 IST

ಮಂಗಳೂರು, ಫೆ. 3: ಬೆಂಗ್ರೆಯಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 6 ಮಂದಿ ಆರೋಪಿಗಳ ಪೈಕಿ 3 ಆರೋಪಿಗಳು ನ್ಯಾಯಾಂಗ ಬಂಧನದಿಂದ ಅತಿ ಶೀಘ್ರದಲ್ಲೇ ಹೊರ ಬಂದಿರುವ ಬಗ್ಗೆ ಮಂಗಳೂರು ಪೊಲೀಸ ಆಯುಕ್ತರ ಕಚೇರಿಯಲ್ಲಿ ನಡೆದ ದಲಿತ ಕುಂದು ಕೊರತೆ ಸಂಬಂಧಿಸಿ ರವಿವಾರ ನಡೆದ ಮಾಸಿಕ ಸಭೆಯಲ್ಲಿ ದಲಿತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ದಲಿತ ಮುಖಂಡ ಸದಾಶಿವ ಉರ್ವಸ್ಟೋರ್ ವಿಷಯ ಪ್ರಸ್ತಾವಿಸಿ, ಬೆಂಗ್ರೆ ಗ್ಯಾಂಗ್ ರೇಪ್ ಪ್ರಕರಣದ ಮೂವರು ಆರೋಪಿಗಳು ಒಂದೇ ತಿಂಗಳಲ್ಲಿ ಜಾಮೀನು ಪಡೆದು ನ್ಯಾಯಾಂಗ ಬಂಧನದಿಂದ ಹೊರಗೆ ಬಂದು ತಿರುಗಾಡುತ್ತಿದ್ದಾರೆ. ಸಂತ್ರಸ್ತ ಯುವತಿ ಇನ್ನೂ ರಿಮಾಂಡ್ ಹೋಂನಲ್ಲಿದ್ದಾಳೆ. ಹಾಗಾಗಿ ಇಲ್ಲಿ ಪೊಲೀಸರು ಪ್ರಕರಣ ದಾಖಲಿಸು ವಾಗ ಸಾಕಷ್ಟು ಕಠಿಣ ಸೆಕ್ಷನ್‌ಗಳನ್ನು ಹಾಕಿಲ್ಲ ಎಂಬ ಸಂಶಯ ಬರುತ್ತಿದೆ ಎಂದರು.

ಇದಕ್ಕೆ ಉತ್ತರಿಸಿದ ಡಿಸಿಪಿ ಉಮಾ ಪ್ರಶಾಂತ್, ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತದೆ. ನ್ಯಾಯಾಂಗದ ಪ್ರಕ್ರಿಯೆಯನ್ನು ನಾವು ಪ್ರಶ್ನಿಸುವಂತಿಲ್ಲ. ಆದರೆ ಆರೋಪಿಗಳಿಗೆ ಜಾಮೀನು ನೀಡಿರುವ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಆರೋಪಿಗಳು ವಕೀಲರ ಮೂಲಕ ಜಾಮೀನು ಪಡೆದು ಹೊರ ಬರುತ್ತಾರೆ. ಇಂತಹ ಪ್ರಕರಣಗಳಲ್ಲಿ ವಕಾಲತ್ತು ವಹಿಸಬಾರದೆಂದು ಸಮಾಜ ವಕೀಲರನ್ನು ಕೋರಿಕೊಳ್ಳಬಹುದು ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಸ್ಪಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದರು.

ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ

ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡ ಶಿವನಾಥನ್ ಪ್ರಕರಣದಲ್ಲಿ ಎರಡು ವರ್ಷಗಳಾದರೂ ನ್ಯಾಯ ಸಿಕ್ಕಿಲ್ಲ ಎಂದು ದಲಿತ ಮಹಿಳೆ ಅಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ, ಈ ಪ್ರಕರಣದಲ್ಲಿ ಶಿವನಾಥನ್ ಪಡೆದುಕೊಂಡಿರುವ ಜಾತಿ ಪ್ರಮಾಣ ಪತ್ರ ರದ್ದು ಪಡಿಸಲಾಗಿದೆ. ಇದೀಗ ಆರೋಪಿ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಅನುಮತಿ ಕೋರಿ ಎಡಿಜಿಪಿಗೆ ಪತ್ರ ಬರೆಯಲಾಗಿದೆ. ಎಡಿಜಿಪಿಯಿಂದ ಅನುಮತಿ ಲಭಿಸಿದ ಬಳಿಕ ಶಿವನಾಥನ್ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಉರ್ವಸ್ಟೋರ್ ಬಸ್ ನಿಲ್ದಾಣದ ಬಳಿ ಬೆಳಗ್ಗೆ 8ರಿಂದ 10 ಗಂಟೆ ತನಕ ಹಾಗೂ ಸಂಜೆ 5ರಿಂದ 7ಗಂಟೆಯವರೆಗೆ ಪ್ರಯಾಣಿಕರ ದಟ್ಟಣೆ ಇರುತ್ತದೆ. 3-4 ಬಸ್ಸುಗಳು ಒಟ್ಟಿಗೆ ಬಂದು ನಿಲ್ಲುತ್ತವೆ. ಈ ಸಂದರ್ಭ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಆದ್ದರಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದು ಸದಾಶಿವ ಉರ್ವಸ್ಟೋರ್ ಮನವಿ ಮಾಡಿದರು.

ಪಚ್ಚನಾಡಿಯಲ್ಲಿ ಮಹಾನಗರ ಪಾಲಿಕೆಯ ನೆರವು ಪಡೆದು ಮನೆ ಕಟ್ಟಿಸಿ, ಹಕ್ಕು ಪತ್ರವನ್ನೂ ಹೊಂದಿದ್ದು, ಹಲವು ವರ್ಷಗಳಿಂದ ವಾಸವಾಗಿರುವ ದಲಿತ ಮಹಿಳೆಯ ಅಂಗಳದಲ್ಲಿ ಇದೀಗ ಇನ್ನೋರ್ವ ವ್ಯಕ್ತಿ ಮನೆ ಕಟ್ಟಿಸುತ್ತಿದ್ದು, ಇದರಿಂದ ದಲಿತ ಮಹಿಳೆಗೆ ಸಮಸ್ಯೆಯಾಗಿದೆ. ಮನೆಯನ್ನು ತೆರವು ಮಾಡುವಂತೆ ಪಾಲಿಕೆ ಆದೇಶ ನೀಡಿದರೂ ಕಾರ್ಯಗತವಾಗಿಲ್ಲ ಎಂದು ದಲಿತ ಮುಖಂಡರೊಬ್ಬರು ದೂರು ನೀಡಿದರು.

ಈ ಬಗ್ಗೆ ಪಾಲಿಕೆಗೆ ರಕ್ಷಣೆ ಬೇಕಿದ್ದರೆ ಪೊಲೀಸ್ ಇಲಾಖೆ ಕೊಡಬಹುದು, ತೆರವು ಕಾರ್ಯಾಚರಣೆಯನ್ನು ಪಾಲಿಕೆಯೇ ಮಾಡಬೇಕಾಗಿದೆ ಎಂದು ಡಿಸಿಪಿ ಉಮಾ ಪ್ರಶಾಂತ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News