ಅಕ್ರಮ ​ಮರಳು ಸಾಗಾಟ ಪ್ರಕರಣ ದಾಖಲಿಸದ ಆರೋಪ: ಗಣಿ-ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಅಮಾನತು

Update: 2019-02-03 16:59 GMT

ಮಂಗಳೂರು, ಫೆ. 3: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವೇಳೆ ವಶಪಡಿಸಿಕೊಂಡ ಲಾರಿಗಳನ್ನು ಪ್ರಕರಣ ದಾಖಲಿಸದೆ ಬಿಡುಗಡೆ ಮಾಡಿದ ಆರೋಪದಲ್ಲಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಸುಮಿತ್ರಾ ಎಸ್. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಪ್ರಕರಣದ ಮೂಲಕ ಮರಳು ಮಾಫಿಯಾದ ಪ್ರಭಾವ ಮತ್ತು ಅಧಿಕಾರಿಗಳ ಶಾಮೀಲು ಮತ್ತೊಮ್ಮೆ ಬೆಳಕಿಗೆ ಬಂದಂತಾಗಿದೆ.

ಕೆಲ ಸಮಯದ ಹಿಂದೆ ಅರಣ್ಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 15 ಲಾರಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದರ ವಿರುದ್ಧ ಪ್ರಕರಣ ದಾಖಲಿಸಲು ವಾಹನಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ ಕೆಲವು ಒತ್ತಡದ ಮೇರೆಗೆ ಪ್ರಕರಣ ದಾಖಲಿಸದೆ ಕೇವಲ ದಂಡ ಸಂಗ್ರಹಿಸಿ ಈ ವಾಹನಗಳನ್ನು ಬಿಡುಗಡೆಗೊಳಿಸಲಾಗಿತ್ತು.

ಈ ವಿಚಾರ ಜನವರಿ ತಿಂಗಳಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಗಮನಕ್ಕೆ ಬಂದಿತ್ತು. ತಕ್ಷಣ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ವರದಿಯೊಂದನ್ನು ಕಳುಹಿಸಿ, ಪ್ರಕರಣದ ಕುರಿತು ವಿಚಾರಣೆ ನಡೆಸುವಂತೆ ಶಿಫಾರಸು ಮಾಡಿದ್ದರು.

ವಿಚಾರಣೆ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸುಮಿತ್ರಾ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳಲ್ಲಿ ಹಿರಿಯರಾಗಿರುವ ಪದ್ಮಶ್ರೀ ಅವರಿಗೆ ಪ್ರಭಾರ ಉಪ ನಿರ್ದೇಶಕರ ಜವಾಬ್ದಾರಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News