‘ಗುರುಗಳು ಹೇಳಿದಂತೆ ಶಿಕ್ಷಣಕ್ಕೆ ಒತ್ತು ನೀಡಿ ಮುನ್ನಡೆಯೋಣ’
ಬ್ರಹ್ಮಾವರ, ಫೆ. 3: ನಾರಾಯಣಗುರುಗಳು ಹೇಳಿದಂತೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ನಮ್ಮ ಸಮಾಜ ಮುನ್ನಡೆಯುವಂತೆ ಮಾಡೋಣ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ಜಿಲ್ಲೆಯ ಸಮಸ್ತ ಬಿಲ್ಲವ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬ್ರಹ್ಮಾವರದ ಗಾಂಧಿ ಮೈದಾನ ದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಬಿಲ್ಲವ ಮಹಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ತಾನು ಚಿಕ್ಕವಳಿದ್ದಾಗ, ತಾಯಿ ಹೇಳುತಿದ್ದ ಆಕೆ ಅನುಭವಿಸಿದ ಅಸ್ಪೃಶ್ಯತೆಯ ಕತೆ ನನಗಿನ್ನೂ ಹಸಿರಾಗಿದೆ. ಅಂದು ಚಿಪ್ಪಿನಲ್ಲಿ ನೀರು ಕುಡಿಯುತಿದ್ದುದನ್ನು ತಾಯಿ ನನಗೆ ವಿವರಿಸಿದ್ದರು. ಆದರೆ ನಾರಾಯಣಗುರು, ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಅವರಿಂದಾಗಿ ನಾವಿಂದು ಸಮಾಜದಲ್ಲಿ ಸಮಾನತೆಯನ್ನು ಕಾಣುವಂತಾಗಿದೆ ಎಂದರು.
ಇಂದು ಸಮಾವೇಶದ ಆಯೋಜಕರು ಸಮಗ್ರ ಬಿಲ್ಲವ ಸಮಾಜದ ಪರವಾಗಿ ನೀಡಿದ ಮೂರು ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಮುಖ್ಯಮಂತ್ರಿ ಗಳಿಗೆ ತಲುಪಿಸುತ್ತೇನೆ. ಸಮಾವೇಶದ ಬೇಡಿಕೆಗಳ ಕುರಿತಂತೆ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಸಚಿವೆ ಜಯಮಾಲ ಸಭೆಗೆ ತಿಳಿಸಿದರು.
ನಾರಾಯಣ ಗುರುಗಳು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಅರಿತು ಅದನ್ನು ಮುಂದಿನ ಪೀಳಿಗೆಗೆ ಒದಗಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ಇನ್ನು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳವುದು ಎಲ್ಲರ ಕರ್ತವ್ಯ. ನಮ್ಮ ಯುವಕ-ಯುವತಿಯರು ಉದ್ಯೋಗಿನಿ, ಕಿರುಸಾಲ ಯೋಜನೆ, ಸಮೃದ್ಧಿ ಯೋಜನೆ ಹಾಗೂ ವಸತಿ ಯೋಜನೆಗಳ ಲಾಭವನ್ನು ಪಡೆಯಲು ಮುಂದಾಗ ಬೇಕು ಎಂದವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಲ್ಲವ ಸಮಾಜ ತಮ್ಮ ಹಕ್ಕುಗಳಿಗಾಗಿ ಇಲ್ಲಿ ಸೇರಿರುವುದು ಒಂದು ಐತಿಹಾಸಿಕ ಸಂಗತಿ. ಮೀಸಲಾತಿಯಿಂದ ಪ್ರತಿಭೆಗೆ ತಿಲಾಂಜಲಿ ಆಗುತ್ತದೆ ಎಂಬುದು ತಪ್ಪು ಅಭಿಪ್ರಾಯ. ಬೇಡಿಕೆಗಳ ಈಡೇರಿಕೆಗೆ ಎಲ್ಲಾ ಪಕ್ಷಗಳ ನಾಯಕರೊಂದಿಗೆ ಸೇರಿ ಹೋರಾಡಬೇಕು. ಮೀಸಲಾತಿ ಎಂಬುದು ಬಡತನ ನಿರ್ಮೂಲನಕ್ಕಲ್ಲ. ನಾವು ಸಮಬಾಳು-ಸಮಪಾಲು ಕೇಳಬೇಕು ಎಂದರು.
ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅಧಿವೇಶ ಆರಂಭಗೊಂಡಾಗ ನಾವೆಲ್ಲ ಒಟ್ಟಾಗಿ ಮುಖ್ಯಮಂತ್ರಿಗಲ ಬಳಿ ತೆರಳಿ ಸಮಾವೇಶದ ಬೇಡಿಕೆ ಮುಂದಿಡುತ್ತೇವೆ. ಗುರಿ ಮುಟ್ಟುವವರೆಗೆ ಎಲ್ಲರೂ ಸೇರಿ ಹೋರಾಡುತ್ತೇವೆ ಎಂದು ಸಭೆಗೆ ಭರವಸೆ ನೀಡಿದರು.
ಗುರು ನಾರಾಯಣ ಗುರು ನಿಗಮದ ಸ್ಥಾಪನೆ ಹಾಗೂ ನಾರಾಯಣ ಗುರುಗಳ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪಿಸುವ ಕುರಿತು ನಾವು ಪ್ರಯತ್ನಿಸೋಣ ಎಂದರು. ಇದೇ ವೇಳೆ ಕಾರ್ಕಳದ ಕೋಟಿಚೆನ್ನಯ್ಯ ಥೀಮ್‌ಪಾರ್ಕ್‌ನ ಅಭಿವೃದ್ಧಿಗೆ ಕೆಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಸಚಿವೆ ಜಯಮಾಲ ನುಡಿದರು.
ಕನ್ಯಾಡಿ ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್‌ನ ಸದ್ಗುರು ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಕಾರ್ಕಳ ಬೊಲ್ಯೊಟ್ಟು ಶ್ರೀಗುರು ದೇವಾಶ್ರಮದ ಸದ್ಗುರು ಶ್ರೀವಿಖ್ಯಾತಾನಂದ ಸ್ವಾಮೀಜಿ ಹೊಸ್ಮಾರು ಅವರು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಸಮಾವೇಶದ ಆಯೋಜಕರ ಪರವಾಗಿ ಸಚಿವೆ ಜಯಮಾಲ, ಬಿ.ಕೆ.ಹರಿಪ್ರಸಾದ್ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶ್ರೀವಿಖ್ಯಾತಾನಂದ ಸ್ವಾಮೀಜಿ ಮುಂಬಯಿಯ ಸಿ.ಎ. ಪೂಜಾರಿ ಅವರ ನಾರಾಯಣಗುರು ಕೃತಿಯನ್ನು ಬಿಡುಗಡೆಗೊಳಿಸಿದರು.
ಸಮಾವೇಶದ ರೂವಾರಿ, ಬ್ರಹ್ಮಾವರ ಬಿಲ್ಲವ ಸಮಾಜ ಸೇವಾಸಂಘದ ಅಧ್ಯಕ್ಷ, ಕಟಪಾಡಿ ಶ್ರೀವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ.ಪೂಜಾರಿ ಅವರು ಸಚಿವೆ ಜಯಮಾಲ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲಿಸಿ ಮೂರು ಬೇಡಿಕೆಗಳ ಮನವಿ ಪತ್ರವನ್ನು ವಾಚಿಸಿದರು. ಮುಂಬಯಿಯ ಸಾಹಿತಿ ಬಾಬು ಶಿವ ಪೂಜಾರಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಸುಕುಮಾರ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್, ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಮಧು ಬಂಗಾರಪ್ಪ, ಬಿ.ಬಸವರಾಜ್, ಭಟ್ಕಳದ ಜೆ.ಡಿ.ನಾಯ್ಕಾ, ಉದ್ಯಮಿಗಳಾದ ಮುಂಬಯಿ ಸುರೇಶ್ ಪೂಜಾರಿ, ಎನ್.ಟಿ.ಪೂಜಾರಿ, ಮಂಗಳೂರಿನ ನವೀನ್‌ಚಂದ್ರ ಡಿ.ಸುವರ್ಣ ಉಪಸ್ಥಿತರಿದ್ದರು.
ಸಮಾವೇಶದ ಅಚ್ಯುತ ಅಮೀನ್ ಕಲ್ಮಾಡಿ ಪ್ರಾಸ್ತಾವಿಕ ಮಾತುಗಳ ನ್ನಾಡಿದರೆ, ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.ಜಿಲ್ಲಾ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಶು ಕಲ್ಮಾಡಿ ವಂದಿಸಿದರು.
ಮೂರು ಬೇಡಿಕೆಗಳ ಮನವಿ ಅರ್ಪಣೆ
ಸಮಾರಂಭದಲ್ಲಿ ಬಿಲ್ಲವ ಸಮಾಜ ಪರವಾಗಿ ಮೂರು ಪ್ರಮುಖ ಬೇಡಿಕೆ ಗಳನ್ನೊಳಗೊಂಡ ಮನವಿ ಪತ್ರವನ್ನು ಸಚಿವೆ ಜಯಮಾಲ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬಿ.ಎನ್.ಶಂಕರಪೂಜಾರಿ, ಅಚ್ಯುತ ಕಲ್ಮಾಡಿ ಹಾಗೂ ಪ್ರವೀಣ್ ಎಂ.ಪೂಜಾರಿ ಅವರು ಸಲ್ಲಿಸಿದರು.
ಬಿಲ್ಲವ ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಿಂದುಳಿದ ವರ್ಗ ಮೀಸಲಾತಿಯನ್ನು ಪ್ರವರ್ಗ 2ಎಯಿಂದ ಪ್ರವರ್ಗ 1ಕ್ಕೆ ಮಾರ್ಪಾಡು ಮಾಡಬೇಕು.
ಬಿಲ್ಲವ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ‘ಬ್ರಹ್ಮಶ್ರೀನಾರಾಯಣಗುರು ನಿಗಮ’ವನ್ನು ಸ್ಥಾಪಿಸಿ, ಬಿಲ್ಲವ ಸಮಾಜದ ಸ್ವಸಹಾಯ ಸಂಘಗಳ ಸದಸ್ಯರಿಗೆ ಹಾಗೂ ಕೃಷಿ ಇನ್ನಿತರ ಸ್ವ-ಉದ್ಯೋಗ ಚಟುವಟಿಕೆಗಳಿಗೆ ಬಡ್ಡಿ ರಹಿತ ಸಾಲ ಹಾಗೂ ವಸತಿ ಸೌಲಭ್ಯ ಒದಗಿಸಬೇಕು.
ಶ್ರೀಬ್ರಹ್ಮಬೈದೇರುಗಳ ಗರೋಡಿಗಳ ಅರ್ಚಕರಿಗೆ ಮಾಸಾಶನ ಸೌಲಭ್ಯ ಹಾಗೂ ಗರೋಡಿಗಳ ಸ್ಥಳದ ಪಹಣಿ ಪತ್ರವನ್ನು ಆಯಾ ಗರೋಡಿಗಳ ಹೆಸರಿಗೆ ಮಾರ್ಪಾಡುಗೊಳಿಸಬೇಕು.