ನಕಲಿ ಚಿನ್ನಾಭರಣ ನೀಡಿ ಮಲಬಾರ್ ಗೋಲ್ಡ್‌ಗೆ ವಂಚನೆ
ಉಡುಪಿ, ಫೆ.3: ನಗರದ ಗೀತಾಂಜಲಿ ಶೋಪರ್ ಸಿಟಿ ಕಟ್ಟಡದಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ಮಹಿಳೆಯೊಬ್ಬರು ನಕಲಿ ಚಿನ್ನದ ಸರವನ್ನು ನೀಡಿ, ಅದರ ಬದಲಿಗೆ ಸಾವಿರಾರು ರೂ. ಮೌಲ್ಯದ ಚಿನ್ನಾಭರಣಗಳನ್ನು ಖರೀದಿಸಿ ಮೋಸ ಮಾಡಿರುವ ಘಟನೆ ಜ.29ರಂದು ಸಂಜೆ ವೇಳೆ ನಡೆದಿದೆ.
ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಗೆ ಸರಿತಾ ಪಂಡೆ ಎಂಬ ಹೆಸರು ಹೇಳಿಕೊಂಡು ಬಂದ ಮಹಿಳೆ 26.440 ಗ್ರಾಂ ಚಿನ್ನದ ಸರವನ್ನು ಕೊಟ್ಟು ಬದಲಿಗೆ ಒಂದು ಲಾಕೆಟ್, ಉಂಗುರ, ಕಿವಿಯೋಲೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಆ ಚಿನ್ನದ ಸರವನ್ನು ಮೇಶಿನ್‌ನಲ್ಲಿ ಪರೀಕ್ಷಿಸಿದಾಗ ಆ ಚಿನ್ನದ ಸರವು 916 ಪರಿಶುದ್ದತೆಯನ್ನು ತೋರಿಸುತ್ತಿದ್ದು, ಅದರಲ್ಲಿ ಹಾಲ್ ಮಾರ್ಕ್ಸ್ ಇರುವುದನ್ನು ಕೂಡ ಖಚಿತಪಡಿಸಲಾಗಿತ್ತು.
ನಂತರ ಇದಕ್ಕೆ ಬದಲಿಯಾಗಿ ಆಕೆ ಸುಮಾರು 81 ಸಾವಿರ ರೂ. ಮೌಲ್ಯದ 14.01 ಗ್ರಾಂ ಪೆಂಡೆಂಟ್, 4.0430 ಗ್ರಾಂ ಕಿವಿಯೋಲೆ ಹಾಗೂ 3.130 ಗ್ರಾಂ ಅನ್‌ಕಟ್ ಡೈಮಂಡ್ ಉಂಗುರವನ್ನು ಖರೀದಿಸಿದ್ದಳು. ಉಳಿದ 2,750 ರೂ.ವನ್ನು ಆಕೆಗೆ ಮಳಿಗೆಯವರು ನೀಡಿದ್ದರು. ಅದೇ ದಿನ ರಾತ್ರಿ ಮತ್ತೆ ಆ ಸರವನ್ನು ಮರು ಪರೀಕ್ಷೆ ಮಾಡಿದಾಗ ಆ ಸರದ ಒಳಗಡೆ ತಾಮ್ರದ ಅಂಶ ಇರುವುದು ಕಂಡುಬಂದಿದೆ.
ಈ ಮಹಿಳೆ ಸಂಸ್ಥೆಗೆ ಚಿನ್ನವೆಂದು ನಂಬಿಸಿ ಮೋಸ ಮಾಡಿರುವುದಾಗಿ ಮಳಿಗೆಯ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಮೈಸೂರಿನಲ್ಲಿ ವಶಕ್ಕೆ?
ಉಡುಪಿಯ ಮಳಿಗೆಯಲ್ಲಿ ವಂಚಿಸಿದ ಮಹಿಳೆಯ ಫೋಟೋವನ್ನು ಸಂಸ್ಥೆ ಯವರು ತಮ್ಮ ಎಲ್ಲ ಮಳಿಗೆಗಳಿಗೂ ರವಾನಿಸಿದ್ದರು. ಆ ಹಿನ್ನೆಲೆಯಲ್ಲಿ ಫೆ.2 ರಂದು ಮೈಸೂರಿನ ಮಲಬಾರ್ ಗೋಲ್ಡ್ ಮಳಿಗೆಗೆ ಆಗಮಿಸಿದ ಮಹಿಳೆ ಯೊಬ್ಬರ ಬಗ್ಗೆ ಸಂಶಯಗೊಂಡ ಅಲ್ಲಿನ ಸಿಬ್ಬಂದಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾ ರಣೆ ನಡೆಸುತ್ತಿದ್ದಾರೆ. ಉಡುಪಿಯಲ್ಲೂ ವಂಚನೆ ಎಸಗಿರುವುದು ಈಕೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಉಡುಪಿ ಪೊಲೀಸರ ತಂಡ ಮೈಸೂರಿಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.