×
Ad

ಮೂಡುಬಿದಿರೆಯಲ್ಲಿ ಯುವವಾಹಿನಿ `ಡೆನ್ನಾನ ಡೆನ್ನನ 2019' ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ

Update: 2019-02-03 23:28 IST

ಮೂಡುಬಿದಿರೆ, ಫೆ. 3: ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವವನ್ನು ಸಾರಿದ ಶ್ರೀ ನಾರಾಯಣ ಗುರು ಇಡಿಯ ಮನುಕುಲಕ್ಕೆ ಗುರುಗಳಾಗಿದ್ದಾರೆ. ಮನುಕುಲದ ಮೇಲೆ ವಿಶ್ವಾಸವಿಟ್ಟವರಿಗೆ ನಾರಾಯಣ ಗುರುವೇ ಆದರ್ಶ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.

ಅವರು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ರವಿವಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಆಶ್ರಯ ಹಾಗೂ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ` ಡೆನ್ನಾನ ಡೆನ್ನನ 2019' ಯುವವಾಹಿನಿ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ಸತ್ಯದ ನಡೆ-ನುಡಿ ಸದಾ ಸರ್ವ ಜಾತಿಯವರಿಗೂ ಅನುಸರಣೀಯ. ಯುವ ಸಂಪತ್ತು ಈ ದೇಶದ ಸಂಪತ್ತು. ಬಿಲ್ಲವ ಜನಾಂಗದ ಮಹಾಶಕ್ತಿ ಯುವಶಕ್ತಿ. ಯುವ ಸಮಾಜವನ್ನು ಕ್ರೀಡೆ, ಸಾಂಸ್ಕøತಿಕ ರಂಗಗಳಲ್ಲಿ  ಸಧೃಡಗೊಳಿಸಬೇಕಾಗಿದೆ. ಈ ಸಾಂಸ್ಕೃತಿಕ ಸ್ಪರ್ಧೆಯು ಯುವ ಸಮುದಾಯದಲ್ಲಿ ಸೃಜನಶೀಲತೆಯನ್ನು ಬೆಳೆಸಲಿ. ತುಳುನಾಡಿನ ಜಾತಿ ವ್ಯವಸ್ಥೆಯ ನಡುವೆ ಎಂದೂ ಅಭಿಪ್ರಾಯ ಭೇದ ಬರಕೂಡದು ಎಂದವರು ಹೇಳಿದರು. ಸ್ವಾಗತ ಸಮಿತಿ ಅಧ್ಯಕ್ಷ ನಾರಾಯಣ  ಪಿ.ಎಂ ಜತೆಗೂಡಿ ಜೋಡಿ ಬಿಲ್ಲುಗಳಿಗೆ ಬಾಣ ಹೂಡಿ ಅವರು ಸ್ಪರ್ಧೆಗಳನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಪ್ರತಿಭೆ ಹುಟ್ಟಿನಿಂದ ಬರುವಂತದ್ದು. ಆ ಪ್ರತಿಭೆಯನ್ನು ಸಮಾಜದಲ್ಲಿ ಅರಳಿಸುವ ಉತ್ತೇಜನಬೇಕು. ಆ ಉತ್ತೇಜನವನ್ನು ಯುವವಾಹಿನಿಯು ನೀಡುತ್ತದೆ. ಈ ಯುವವಾಹಿನಿಯ ಮೂಲಕ ಕಲಾವಿದರನ್ನು, ಪ್ರತಿಭೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ವಿಚಾರ ಎಂದರು.

ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ. ಸುವರ್ಣ ಮಾತನಾಡಿ ಬಿಲ್ಲವ ಸಮಾಜವು ಅಭಿಚೃದ್ಧಿಯ ಧ್ಯೇಯವಿರಿಸಿಕೊಂಡು ಮುಂದುವರಿಯುತ್ತಿದೆ. ಇಂದು ಈ ಸಮಾಜಕ್ಕೆ ದೊರಕುವ ಸವಲತ್ತನ್ನು ಸರಿಯಾದ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು. ಆದರೆ ಇಂದು ಯುವ ಸಮುದಾಯ ಸಮಾಜದಲ್ಲಿ ಹಾದಿತಪ್ಪುತ್ತಿದ್ದು ಮಾರ್ಗದರ್ಶನದ ಕೊರತೆಯನ್ನು ಇದು ತೋರಿಸುತ್ತದೆ. ಯುವ ಜನಾಂಗವನ್ನು ಸರಿಯಾದ ಮಾರ್ಗದರ್ಶನದ ಮೂಲಕ ಸಧೃಡರನ್ನಾಗಿಸಬೇಕು ಎಂದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ದ್ವಜಾರೋಹಣ ನೆರವೇರಿಸಿದರು. ಮೂಡುಬಿದಿರೆ ಘಟಕದ ಅಧ್ಯಕ್ಷ ರಾಜೇಶ್ ಡಿ.ಕೋಟ್ಯಾನ್ ಅಧ್ಯಕ್ಷತೆವಹಿಸಿದ್ದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಳದ ಅಧ್ಯಕ್ಷ ಎಚ್.ಎಸ್ ಸಾಯಿರಾಮ್, ಚೌಟರ ಅರಮನೆಯ ಕುಲದೀಪ ಎಂ., ಉದ್ಯಮಿ ಕೆ.ಶ್ರೀಪತಿ ಭಟ್, ಮೂಡುಬಿದಿರೆ ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಕೋಟಿಚೆನ್ನಯ ಸಿನಿಮಾ  ನಿರ್ಮಾಪಕ ರಾಜಶೇಖರ್ ಕೋಟ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಟಿ.ಶಂಕರ್ ಸುವರ್ಣ, ಮೂಡುಬಿದಿರೆ ಬಿಲ್ಲವ ಸಂಘದ ಅಧ್ಯಕ್ಷ ರವೀಂದ್ರ ಎಂ. ಸುವರ್ಣ, ಗೌರವ ಸಲಹೆಗಾರ ಟಿ.ಶಂಕರ್ ಸುವರ್ಣ, ಕಾರ್ಯದರ್ಶಿ ರಾಜೇಶ್ ಸುವರ್ಣ, ಮೂಡುಬಿದಿರೆ ಘಟಕದ ಸಂಚಾಲಕ ಜಗದೀಶ್ಚಂದ್ರ ಡಿ.ಕೆ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ನಾರಾಯಣ ಪಿ.ಎಂ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಮುರಳೀಕೃಷ್ಣ ಆರ್ ವಂದಿಸಿದರು. ದಿನೇಶ್ ಕುಮಾರ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News