ದಲಿತ ಹೋರಾಟಗಳ ದಮನ ತೇಲ್ತುಂಬ್ಡೆ ಬಂಧನದ ಗುರಿ

Update: 2019-02-04 04:14 GMT

ಖ್ಯಾತ ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ ಬಂಧನ ಪ್ರಕರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಕೋಲುಕೊಟ್ಟು ಪೆಟ್ಟು ತಿಂದಿದೆ. ತಪ್ಪೋ-ಸರಿಯೋ, ನ್ಯಾಯವೋ, ಅನ್ಯಾಯವೋ ತೇಲ್ತುಂಬ್ಡೆ ಅವರನ್ನು ಬಂಧಿಸಿಯೇ ಸಿದ್ಧ ಎಂದು ರಾತ್ರೋ ರಾತ್ರಿ ಅವರ ನಿವಾಸಕ್ಕೆ ನುಗ್ಗಿದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆದರೆ ನ್ಯಾಯಾಲಯ ಪೊಲೀಸರ ಕ್ರಮವನ್ನು ‘ಕಾನೂನು ಬಾಹಿರ ಮತ್ತು ನ್ಯಾಯಾಂಗ ನಿಂದನೆ’ ಎಂದು ಹೇಳಿ ತೇಲ್ತುಂಬ್ಡೆ ಅವರ ಬಿಡುಗಡೆಗೆ ಆದೇಶಿಸಿತು. ತೇಲ್ತುಂಬ್ಡೆ ಅವರಿಗೆ ನಾಲ್ಕು ವಾರಗಳ ಕಾಲ ಬಂಧನದಿಂದ ರಕ್ಷಣೆ ನೀಡಲಾಗಿದೆ. ನಿರೀಕ್ಷಣಾ ಜಾಮೀನು ತಿರಸ್ಕೃತವಾದ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಆದೇಶ ನೀಡುವ ಅಧಿಕಾರ ಇರುವುದು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅಥವಾ ಸುಪ್ರೀಂಕೋರ್ಟಿಗೆ ಎಂದು ನ್ಯಾಯಾಲಯ ಹೇಳಿದೆ. ಸುಪ್ರೀಂಕೋರ್ಟ್ ನ ಆದೇಶವನ್ನು ಸರಿಯಾಗಿ ಪರಿಶೀಲಿಸದೆ ಅವಸರವಸರವಾಗಿ ತೇಲ್ತುಂಬ್ಡೆ ಅವರನ್ನು ಬಂಧಿಸುವ ಅನಿವಾರ್ಯ ಪೊಲೀಸರಿಗೆ ಯಾಕಿತ್ತು ಎನ್ನುವುದು ಇದೀಗ ಚರ್ಚೆಗೆ ಒಳಗಾಗಬೇಕಾದ ವಿಷಯ.

ಆನಂದ್ ತೇಲ್ತುಂಬ್ಡೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದವರು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಅವರು ವಿವಿಧ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ದೇಶ ವಿದೇಶಗಳಲ್ಲಿ ನಿರ್ವಹಿಸಿದವರು. ಇದೇ ಸಂದರ್ಭದಲ್ಲಿ ಶಿಕ್ಷಣತಜ್ಞರೂ, ಮಾನವಹಕ್ಕು ಹೋರಾಟಗಾರರಾಗಿಯೂ ಗುರುತಿಸಿಕೊಂಡರು. ಅಂಬೇಡ್ಕರ್ ಚಿಂತನೆಗಳನ್ನು ದೇಶಾದ್ಯಂತ ಪಸರಿಸುವಲ್ಲಿ ಅವರ ಪಾತ್ರ ದೊಡ್ಡದು. ಖೈರ್ಲಾಂಜಿಯಲ್ಲಿ ದಲಿತರ ಮೇಲೆ ಬರ್ಬರ ದೌರ್ಜನ್ಯ ನಡೆದಾಗ ಆ ಪ್ರಕರಣವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಲು ತೇಲ್ತುಂಬ್ಡೆ ಅವರ ಬರಹಗಳಿಂದ ಸಾಧ್ಯವಾಯಿತು. ದೇಶಾದ್ಯಂತ ಅಂಬೇಡ್ಕರ್ ಚಿಂತನೆಗಳನ್ನು ಹರಡುತ್ತಿರುವ ಇವರು, ಈ ದೇಶದ ಪ್ರಜಾಸತ್ತೆಯ ಉಳಿವಿಗೆ ಹಗಲಿರುಳು ದುಡಿಯುತ್ತಿರುವವರು. ತೇಲ್ತುಂಬ್ಡೆ ಸಾರ್ವಜನಿಕವಾಗಿ ಸದಾ ಗುರುತಿಸುತ್ತಾ ಬಂದವರು. ಅವರೆಂದೂ ಭೂಗತವಾಗಿ ಕೆಲಸ ಮಾಡಿದವರಲ್ಲ.

ಇಂದು ದೇಶಾದ್ಯಂತ ಕೋಮುವಿದ್ವೇಷವನ್ನು ಹರಡುತ್ತಾ ಗಲಭೆಗಳನ್ನು ಎಬ್ಬಿಸುವವರು, ಗುಂಪು ಹತ್ಯೆಗಳನ್ನು ಮಾಡುತ್ತಿರುವವರನ್ನು ಬಂಧಿಸುವ ಕುರಿತಂತೆ ಪೊಲೀಸರಿಗೆ ಯಾವ ಆಸಕ್ತಿಯೂ ಇಲ್ಲ. ಇದೇ ಸಂದರ್ಭದಲ್ಲಿ ಈವರೆಗೆ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರದ ಈ ದೇಶದ ಹೆಮ್ಮೆಯ ಚಿಂತಕನನ್ನು ಬಂಧಿಸಲು ಪೊಲೀಸರು ಅತ್ಯಾತುರ ತೋರಿಸುತ್ತಿದ್ದಾರೆ. ಇದಕ್ಕೆ ಕಾರಣವಾದರೂ ಏನು? ತೇಲ್ತುಂಬ್ಡೆಯವರ ಹಣೆಗೆ ಪೊಲೀಸರು ‘ಅರ್ಬನ್ ನಕ್ಸಲ್’ ಹಣೆ ಪಟ್ಟಿ ಕಟ್ಟಿ ಅವರನ್ನು ಬಂಧಿಸಿ ಜೈಲಿಗೆ ತಳ್ಳಿದರೆ ಈ ದೇಶಕ್ಕಾಗುವ ಲಾಭವಾದರೂ ಏನು? ಈ ವಿಚಾರವಾದಿ, ಚಿಂತಕನ ಬಾಯಿಯನ್ನು ಮುಚ್ಚಿಸಿದರೆ ಅದರಿಂದ ನಷ್ಟ ಪ್ರಜಾಸತ್ತೆಗೆ. ಅಂದರೆ ಪ್ರಜಾಸತ್ತೆಯ ಪರವಾಗಿ ಮಾತನಾಡುವ ಎಲ್ಲ ಶಕ್ತಿಗಳನ್ನು ಹಂತ ಹಂತವಾಗಿ ಬಾಯಿಮುಚ್ಚಿಸುವ ಭಾಗವಾಗಿಯೇ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದಾರೆ. ತೀವ್ರ ರಾಜಕೀಯ ಒತ್ತಡವಿಲ್ಲದೇ ಇದ್ದರೆ, ನ್ಯಾಯಾಂಗದ ಆದೇಶದ ಹೊರತಾಗಿಯೂ ಅವರು ತೇಲ್ತುಂಬ್ಡೆಯನ್ನು ಬಂಧಿಸುವ ಅಗತ್ಯವಿದ್ದಿರಲಿಲ್ಲ.

ಕೋರೆಗಾಂವ್‌ನಲ್ಲಿ ದಲಿತರು ವಿಜಯೋತ್ಸವ ನಡೆಸುತ್ತಿರುವುದು ಹೊಸತೇನೂ ಅಲ್ಲ. ಜಾತೀವಾದಿ ಪೇಶ್ವೆಗಳ ವಿರುದ್ಧ 500 ಮಹಾರ್ ದಲಿತರು ವಿಜಯ ಸಾಧಿಸಿದ ದಿನ ಕೋರೆಗಾಂವ್ ವಿಜಯೋತ್ಸವ ದಿನ. ಅಂದು ಪೇಶ್ವೆ ಆಡಳಿತ ದೇಶದಲ್ಲಿ ನಿರ್ನಾಮವಾಯಿತು. ಅಂಬೇಡ್ಕರ್ ಈ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ನಾಂದಿ ಹಾಡಿದವರು. ಕೋರೆಗಾಂವ್‌ನಲ್ಲಿ ವಿಜಯೋತ್ಸವ ಆಚರಿಸಲು ನೆರೆದವರೆಲ್ಲ ನಗರ ನಕ್ಸಲರಾದರೆ, ಮೊತ್ತ ಮೊದಲು ಅಂಬೇಡ್ಕರ್ ಅವರನ್ನೇ ನಮ್ಮ ಪೊಲೀಸ್ ಇಲಾಖೆ ನಗರನಕ್ಸಲ್ ಎಂದು ಕರೆಯಬೇಕಾಗುತ್ತದೆ. ಬಹುಶಃ ಅಂಬೇಡ್ಕರ್ ಏನಾದರೂ ಬದುಕಿದ್ದಿದ್ದರೆ ಅವರನ್ನೂ ನಗರ ನಕ್ಸಲ್ ಎಂದು ಕರೆದು ಜೈಲಿಗೆ ತಳ್ಳುತ್ತಿದ್ದರೋ ಏನೋ. ಪೊಲೀಸರಿಗೆ ಕೋರೆಗಾಂವ್ ವಿಜಯೋತ್ಸವ ಆಚರಣೆ ಮಾಡುವುದೇ ಬೇಕಾಗಿರಲಿಲ್ಲ. ಆ ಆಚರಣೆಯನ್ನು ತಡೆಯುವ ಉದ್ದೇಶದಿಂದ, ಅಲ್ಲಿ ಕೃತಕ ಗಲಭೆಯೊಂದನ್ನು ಸಂಘಪರಿವಾರ ಹಮ್ಮಿಕೊಂಡಿತು. ಸಾಂಬಾಜಿಯ ಗೋರಿಯ ಪಕ್ಕದಲ್ಲೇ ಇದ್ದ ಮಹಾರ್ ದಲಿತನ ಗೋರಿಯನ್ನು ಹಾಳುಗೆಡಹುವ ಮೂಲಕ ದಲಿತರನ್ನು ಉದ್ವಿಗ್ನಗೊಳಿಸಲು ಯತ್ನ ನಡೆಸಿದ್ದು ಸಂಘಪರಿವಾರ. ಈ ಸಂದರ್ಭದಲ್ಲಿ ದಲಿತ ನಾಯಕರು, ಕಾರ್ಯಕರ್ತರು ಗರಿಷ್ಠ ಸಹನೆಯನ್ನು ಪಾಲಿಸಿದ್ದಾರೆ.

ಕೋರೆಗಾಂವ್ ಸಮಾವೇಶದ ಸಂದರ್ಭದಲ್ಲಿ ಮಾಡಿದ ಭಾಷಣಗಳ ವೀಡಿಯೊ ದಾಖಲೆ ಪೊಲೀಸರ ಬಳಿ ಇದೆ. ಒಂದು ವೇಳ ಉದ್ವಿಗ್ನಕಾರಿ ಭಾಷಣ ಮಾಡಿದ್ದಿದ್ದರೆ ಅದರಲ್ಲಿ ದಾಖಲಾಗಬೇಕಾಗಿತ್ತು. ಅಂತಹ ಯಾವುದೇ ದಾಖಲೆಗಳು ಪೊಲೀಸರಲ್ಲಿ ಇದ್ದಿರಲಿಲ್ಲ. ಹೀಗಿರುವಾಗ ಸಮಾವೇಶದಲ್ಲಿ ನೆರೆದ ನಾಯಕರಾಗಲಿ, ಕಾರ್ಯಕರ್ತರಾಗಲಿ ಹಿಂಸಾಚಾರಕ್ಕೆ ಕಾರಣರಾಗುವುದು ಹೇಗೆ? ಇದೇ ಸಂದರ್ಭದಲ್ಲಿ ಸಂಘಪರಿವಾರ ದಲಿತರ ಮೇಲೆ ನಡೆಸಿದ ದಾಳಿಗೆ ಸಾಕ್ಷಿಗಳಿವೆ. ಆದರೂ ಪ್ರಮುಖ ಆರೋಪಿಗಳನ್ನು ಈವರೆಗೆ ಬಂಧಿಸಲಾಗಿಲ್ಲ. ಬಂಧಿಸಿದವರನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದೆ. ಈ ಎಲ್ಲ ಸಂಘಪರಿವಾರದ ಮುಖಂಡರಿಗೆ ಕ್ರಿಮಿನಲ್ ಹಿನ್ನೆಲೆಗಳಿವೆ ಎನ್ನುವುದು ಗಮನಾರ್ಹ. ಆದರೆ ಪೊಲೀಸರು ಅವರ ಕುರಿತಂತೆ ಕುರುಡರಂತಿದ್ದಾರೆ. ಈ ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಸಾಮಾಜಿಕ ಹೋರಾಟಗಾರರೇ ಅವರ ಕೆಂಗಣ್ಣಿಗೆ ಬಲಿಯಾಗಿದ್ದಾರೆ. ಅದರಲ್ಲೂ ತೇಲ್ತುಂಬ್ಡ್ಡೆ ಅವರು ಕೋರೆಗಾಂವ್ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಿರಲಿಲ್ಲ. ಆದರೂ ಅವರನ್ನು ಪೊಲೀಸರು ಗುರಿ ಮಾಡಿದ್ದಾರೆ ಎಂದರೆ ಅವರ ಉದ್ದೇಶ ಸ್ಪಷ್ಟ.

ಪೊಲೀಸರು ಮತ್ತು ಮಹಾರಾಷ್ಟ್ರದ ಮುಖ್ಯ ಸಮಸ್ಯೆ ಕೋರೆಗಾಂವ್ ವಿಜಯೋತ್ಸವ. ಮಹಾರಾಷ್ಟ್ರವನ್ನು ಆಳುತ್ತಿರುವುದು ಪೇಶ್ವೆ ವಂಶಸ್ಥರು. ವಿಜಯೋತ್ಸವ ಪರೋಕ್ಷವಾಗಿ ಈ ಪೇಶ್ವೆ ವಂಶಸ್ಥರಿಗೆ ದೊಡ್ಡ ಮುಖಭಂಗವಾಗಿದೆ. ಹಾಗೆಂದು ಈ ವಿಜಯೋತ್ಸವವನ್ನು ಸರಕಾರ ತಡೆಯುವಂತಿಲ್ಲ. ಹಾಗೊಂದು ವೇಳೆ ತಡೆದರೆ ದೇಶಾದ್ಯಂತ ದಲಿತರು ಸರಕಾರದ ವಿರುದ್ಧ ಬಂಡೇಳುತ್ತಾರೆ. ವಿಜಯೋತ್ಸವವನ್ನು ಆಚರಿಸಿದ್ದಕ್ಕಾಗಿ ದಲಿತ ಮುಖಂಡರನ್ನು ನೇರವಾಗಿ ಬಂಧಿಸುವಂತೆಯೂ ಇಲ್ಲ. ಪರಿಣಾಮವಾಗಿ, ಕೋರೆಗಾಂವ್ ವಿಜಯೋತ್ಸವವನ್ನು ಸಂಘಟಿಸಿದ ಪ್ರಮುಖ ಚಿಂತಕರ ತಲೆಗೆ ‘ಅರ್ಬನ್ ನಕ್ಸಲ್’ ಎಂಬ ಹಣೆಪಟ್ಟಿಯನ್ನು ಕಟ್ಟಲಾಯಿತು. ಇವರು ಪ್ರಧಾನಿಯನ್ನು ಕೊಲೆಗೈಯಲು ಸಂಚು ನಡೆಸಿದ್ದಾರೆ ಎಂಬ ಆರೋಪವನ್ನು ಮಾಡಲಾಯಿತು.

ಆ ಬಳಿಕ ಅವರನ್ನು ಬಂಧಿಸುವ ಪ್ರಕ್ರಿಯೆ ಜಾರಿಗೆ ಬಂತು. ಹೀಗೆ ಎಲ್ಲ ದಲಿತ ಮುಖಂಡರನ್ನು ಬಂಧಿಸಿ, ಈ ವಿಜಯೋತ್ಸವ ಆಚರಣೆಗೆ ನೇತೃತ್ವವೇ ಇಲ್ಲದಂತೆ ಮಾಡುವುದು ಸರಕಾರದ ಉದ್ದೇಶ. ಅವರು ‘ನಗರ ನಕ್ಸಲ್’ ಎಂಬ ಗುರಾಣಿಯನ್ನು ಮುಂದೊಡ್ಡಿ ಬಾಣ ಬಿಡುತ್ತಿರುವುದು ಈ ದೇಶದ ದಲಿತರ ಸ್ವಾಭಿಮಾನದ ವಿರುದ್ಧ. ತೇಲ್ತುಂಬ್ಡೆ ಸದ್ಯಕ್ಕೆ ಬಂಧನದಿಂದ ಬಚಾವಾಗಿರಬಹುದು. ಆದರೆ ಪೊಲೀಸರು ಅವರ ಬೆನ್ನುಬಿಡುವವರಲ್ಲ. ಈ ಬಂಧನ ಪರೋಕ್ಷವಾಗಿ ದಲಿತ ಹೋರಾಟಗಳ ದಮನದ ಮೊದಲ ಹಂತವಾಗಿದೆ. ತೇಲ್ತುಂಬ್ಡೆ ಮತ್ತು ಅವರ ಸಹವರ್ತಿಗಳ ಬಂಧನವನ್ನು ದೇಶದ ದಲಿತರೆಲ್ಲ ಒಂದೇ ಧ್ವನಿಯಿಂದ ಪ್ರತಿಭಟಿಸದೇ ಇದ್ದರೆ, ಮುಂದೆ ದಲಿತರು ಬೀದಿಗಿಳಿದು ಯಾವುದೇ ಪ್ರತಿಭಟನೆ ನಡೆಸುವುದಕ್ಕೂ ಹಿಂಜರಿಯಬೇಕಾದ ಸನ್ನಿವೇಶ ನಿರ್ಮಾಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News