×
Ad

ಮಂಗಳೂರು: ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹಕ್ಕೆ ಚಾಲನೆ

Update: 2019-02-04 18:27 IST

ಮಂಗಳೂರು, ಫೆ. 4: ದ.ಕ.ಜಿಲ್ಲಾ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 30ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ನಗರದಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಈ ಸಂದರ್ಭ ಹಂಪನಕಟ್ಟೆಯಿಂದ ಪೊಲೀಸ್ ಸಮುದಾಯ ಭವನದವರೆಗೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ಜಾಥಾ ನಡೆಸಿ ಗಮನ ಸೆಳೆದರು.

ಪೊಲೀಸ್ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಸ್ತೆ ಸುರಕ್ಷಾ ಸಪ್ತಾಹ ಎಂಬುದು ಜನರಲ್ಲಿ ವಾರದ ಮಟ್ಟಿಗೆ ಜಾಗೃತಿ ಮೂಡಿಸುವ ವ್ಯವಸ್ಥೆಯಾಗಿದೆ. ರಸ್ತೆ ಸುರಕ್ಷತೆಯನ್ನು ಕೇವಲ ಒಂದು ವಾರದ ಮಟ್ಟಿಗೆ ಸೀಮಿತಗೊಳಿಸದೆ ನಿರಂತರವಾಗಿ ನಡೆಸಬೇಕಿದೆ. ಆವಾಗ ಮಾತ್ರ ಇದರ ಪ್ರತಿಫಲ ಸಿಗಲಿದೆ. ಅಪಘಾತ ನಡೆದಾಗ ವೀಡಿಯೋ ಚಿತ್ರೀಕರಣ ಮಾಡುವ ಬದಲು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಬೇಕು. ಒಂದು ಜೀವವನ್ನು ಉಳಿಸಿದರೆ ಒಂದಿಡೀ ಕುಟುಂಬವನ್ನು ಉಳಿಸಿದಂತೆ. ಯಾಕೆಂದರೆ ಒಂದು ಜೀವವನ್ನು ನಂಬಿ ಅದೆಷ್ಟೋ ಕುಟುಂಬಗಳು ಜೀವನ ಸಾಗಿಸುತ್ತದೆ. ಆ ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕಿದೆ ಎಂದರು.

ಅಧಿಕೃತ ವರದಿಯೊಂದರ ಪ್ರಕಾರ ಇಂದು ಜಗತ್ತಿನಲ್ಲಿ ವರ್ಷಕ್ಕೆ 1.2 ಮಿಲಿಯನ್ ಜನರು ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆಯುತ್ತಿದ್ದಾರೆ. ಅಲ್ಲದೆ 20ರಿಂದ 30 ಮಿಲಿಯನ್‌ನಷ್ಟು ಅಪಘಾತದಲ್ಲಿ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಟಿ.ಆರ್.ಸುರೇಶ್ ಹೇಳಿದರು.

ಕೆನರಾ ಬ್ಯಾಂಕ್‌ನ ಎಜಿಎಂ ರಾಮ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್, ಡಿಸಿಪಿ ಹನುಮಂತರಾಯ, ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ದ.ಕ.ಲಾರಿ ಮಾಲಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕಿಶೋರ್ ಕುಮಾರ್ ಮಾರ್ಲ, ಆ್ಯಂಟಿ ಪೊಲ್ಯುಶನ್ ಡ್ರೈವ್‌ನ ಸ್ಥಾಪಕ ಅಬ್ದುಲ್ಲಾ ಎ.ರಹ್ಮಾನ್ ಉಪಸ್ಥಿತರಿದ್ದರು.

ಪೊಲೀಸ್ ಉಪಾಯುಕ್ತೆ ಉಮಾಪ್ರಶಾಂತ್ ಸ್ವಾಗತಿಸಿದರು. ಸಾರಿಗೆ ಉಪಾಯುಕ್ತ ಜೋನ್ ಬಿ.ಮಿಸ್ಕಿತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News