ದಯವಿಟ್ಟು ನನ್ನನ್ನು ಬಹರೈನ್‌ಗೆ ಕಳುಹಿಸಬೇಡಿ: ಥಾಯ್ಲೆಂಡ್ ಅಧಿಕಾರಿಗಳಿಗೆ ಫುಟ್ಬಾಲಿಗನ ಮನವಿ
ಬ್ಯಾಂಕಾಕ್ (ಥಾಯ್ಲೆಂಡ್), ಫೆ. 4: ತನ್ನನ್ನು ಬಹರೈನ್‌ಗೆ ಗಡಿಪಾರು ಮಾಡದಂತೆ ಆ ದೇಶದಿಂದ ಪರಾರಿಯಾಗಿ ಬಂದಿರುವ ಫುಟ್ಬಾಲಿಗರೊಬ್ಬರು ಸೋಮವಾರ ಥಾಯ್ಲೆಂಡ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
‘‘ದಯವಿಟ್ಟು ನನ್ನನ್ನು ಬಹರೈನ್‌ಗೆ ಕಳುಹಿಸಬೇಡಿ’’ ಎಂಬುದಾಗಿ ಬ್ಯಾಂಕಾಕ್‌ನ ನ್ಯಾಯಾಲಯವೊಂದಕ್ಕೆ ಬಂದಾಗ ಬಹರೈನ್ ನಿರಾಶ್ರಿತ ಹಾಗೂ ಆಸ್ಟ್ರೇಲಿಯ ನಿವಾಸಿ ಹಕೀಮ್ ಅಲ್-ಅರೈಬಿ ಮನವಿ ಮಾಡಿದರು.
ನ್ಯಾಯಾಲಯವು ಅವರ ಬಂಧನವನ್ನು ಎರಡು ತಿಂಗಳ ಕಾಲ ವಿಸ್ತರಿಸಿದೆ.
“ನನ್ನನ್ನು ನನ್ನ ತಾಯ್ನಡಿಗೆ ವಾಪಸ್ ಕಳುಹಿಸಿದರೆ ಅಲ್ಲಿ ನನಗೆ ಹಿಂಸೆ ಕೊಡುತ್ತಾರೆ, ನನ್ನ ಸಾವು ಕೂಡ ಸಂಭವಿಸಬಹುದು” ಎಂದು ಅವರು ಹೇಳಿದರು.
“ನನ್ನ ಬಿಡುಗಡೆಗೆ ಸಹಾಯ ಮಾಡುವಂತೆ” ಅವರು ಪತ್ರಕರ್ತರು ಮತ್ತು ಫುಟ್ಬಾಲ್ ಅಧಿಕಾರಿಗಳಲ್ಲಿ ಈ ಸಂದರ್ಭದಲ್ಲಿ ಮನವಿ ಮಾಡಿದರು.
25 ವರ್ಷದ ಅರೈಬಿ ಬಹರೈನ್‌ನ ರಾಷ್ಟ್ರೀಯ ಯುವ ತಂಡದಲ್ಲಿ ಆಡಿದ್ದರು. ಬಳಿಕ ಅವರು ತನ್ನ ದೇಶದಿಂದ ಪಲಾಯನಗೈದರು. ಅವರಿಗೆ ಆಸ್ಟ್ರೇಲಿಯ ಆಶ್ರಯ ನೀಡಿದೆ. ಅಲ್ಲಿ ಅವರು ವೃತ್ತಿಪರ ಫುಟ್ಬಾಲ್ ಕ್ಲಬ್ ಒಂದರಲ್ಲಿ ಆಡುತ್ತಿದ್ದಾರೆ.
ಕಳೆದ ವರ್ಷದ ನವೆಂಬರ್‌ನಲ್ಲಿ ರಜೆ ಕಳೆಯಲು ಥಾಯ್ಲೆಂಡ್‌ಗೆ ಬಂದ ಅವರನ್ನು ಬಹರೈನ್‌ನ ಗಡಿಪಾರು ಕೋರಿಕೆಯಂತೆ ಥಾಯ್ಲೆಂಡ್ ಅಧಿಕಾರಿಗಳು ಬಂಧಿಸಿದ್ದಾರೆ.
ಅವರನ್ನು ಬಹರೈನ್‌ಗೆ ಗಡಿಪಾರು ಮಾಡಬೇಕೇ ಬೇಡವೇ ಎನ್ನುವುದನ್ನು ಎಪ್ರಿಲ್‌ನಲ್ಲಿ ಬ್ಯಾಂಕಾಕ್‌ನ ನ್ಯಾಯಾಲಯ ನಿರ್ಧರಿಸುತ್ತದೆ.
ಸೋಮವಾರದ ವಿಚಾರಣೆಯ ವೇಳೆ ಆಸ್ಟ್ರೇಲಿಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ‘ಫಿಫಾ’ ಅಧಿಕಾರಿಗಳು ಉಪಸ್ಥಿತರಿದ್ದರು.