×
Ad

ಭಾರೀ ಪ್ರವಾಹ: ರಸ್ತೆಗೆ ಬಂದ ಮೊಸಳೆಗಳು!

Update: 2019-02-04 19:34 IST

ಕೇರ್ನ್ಸ್ (ಆಸ್ಟ್ರೇಲಿಯ), ಫೆ. 4: ಈಶಾನ್ಯ ಆಸ್ಟ್ರೇಲಿಯದಲ್ಲಿ ಸಂಭವಿಸಿರುವ ವಿನಾಶಕಾರಿ ಮಹಾ ಪ್ರವಾಹದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ನಿಭಾಯಿಸಲು ಆಸ್ಟ್ರೇಲಿಯ ಸರಕಾರ ಸೋಮವಾರ ಸೇನೆಯನ್ನು ನಿಯೋಜಿಸಿದೆ.

ಪ್ರವಾಹದ ನೀರು ಮನೆಗಳು, ಶಾಲೆಗಳು ಮತ್ತು ವಿಮಾನ ನಿಲ್ದಾಣಗಳನ್ನು ಆವರಿಸಿದೆ ಹಾಗೂ ನೂರಾರು ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ.

ಅದೇ ವೇಳೆ, ಮೊಸಳೆಗಳು ಪ್ರವಾಹದ ನೀರಿನ ಮೂಲಕ ರಸ್ತೆಗಳಿಗೆ ಬಂದಿವೆ.

ಮುಂಗಾರು ಮಳೆಯು ಉತ್ತರದ ರಾಜ್ಯದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಪ್ರವಾಹವನ್ನು ಸೃಷ್ಟಿಸಿದೆ.

ಆಸ್ಟ್ರೇಲಿಯದ ರಕ್ಷಣಾ ಪಡೆಗಳು ಪ್ರವಾಹವನ್ನು ನಿಯಂತ್ರಿಸಲುಸೋಮವಾರ 70,000 ಮರಳು ಚೀಲಗಳನ್ನು ಪೂರೈಸಿವೆ, ಉಭಯವಾಸಿ ಸರಕು ವಾಹನಗಳನ್ನು ನಿಯೋಜಿಸಿವೆ ಹಾಗೂ ಮನೆಗಳ ಮೇಲ್ಛಾವಣಿಗಳ ಮೇಲೆ ರಕ್ಷಣೆಗಾಗಿ ಟಾರ್ಚ್ ಬೆಳಕು ಹಾಯಿಸುತ್ತಿದ್ದವರನ್ನು ರಕ್ಷಿಸಿದೆ.

ಉತ್ತರ ಆಸ್ಟ್ರೇಲಿಯದಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಭಾರೀ ಮಳೆ ಸುರಿಯುತ್ತದೆ. ಆದರೆ, ಇತ್ತೀಚೆಗೆ ಇಲ್ಲಿ ಕೇವಲ ಒಂದು ವಾರದ ಅವಧಿಯಲ್ಲಿ ಒಂದು ವರ್ಷದ ಮಳೆ ಸುರಿದಿದೆ.

ಅಧಿಕಾರಿಗಳು ರವಿವಾರ ಪ್ರಮುಖ ಅಣೆಕಟ್ಟುಗಳ ಪ್ರವಾಹ ಬಾಗಿಲುಗಳನ್ನು ತೆರೆದರು. ಈ ಸಂದರ್ಭದಲ್ಲಿ, ಅಪಾಯಕಾರಿ ಹಾಗೂ ಅತ್ಯಂತ ವೇಗದಲ್ಲಿ ಅಣೆಕಟ್ಟೆಯಿಂದ ನೀರು ಹರಿದಿದೆ.

► ಮೊಸಳೆಗಳ ಸಾಲು!

ಪ್ರವಾಹ ಪೀಡಿತ ಪ್ರದೇಶದ ಹತಾಶ ನಿವಾಸಿಗಳು ದಿಢೀರ್ ನೆರೆ, ಭೂಕುಸಿತ ಮತ್ತು ವಿದ್ಯುತ್ ನಿಲುಗಡೆಗಳಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ನಡುವೆಯೇ, ಮೊಸಳೆಗಳನ್ನೂ ಎದುರಿಸಬೇಕಾಗಿದೆ! ಹಲವಾರು ಉಪ್ಪು ನೀರಿನ ಮೊಸಳೆಗಳು ರಸ್ತೆಗಳಲ್ಲಿ ಪತ್ತೆಯಾಗಿವೆ.

ಪ್ರವಾಹ ನೀರಿನಿಂದ ದೂರ ಉಳಿಯುವಂತೆ ಕ್ವೀನ್ಸ್‌ಲ್ಯಾಂಡ್ ಪೊಲೀಸರು ಜನರಿಗೆ ಕಟು ಎಚ್ಚರಿಕೆ ನೀಡಿದ್ದಾರೆ.

ವಿಪತ್ತಿನ ಪ್ರಮಾಣಕ್ಕೆ ಸ್ಪಂದಿಸುವಲ್ಲಿ ತುರ್ತು ಸೇವೆಗಳ ವಿಭಾಗ ಹೆಣಗಾಡಿದೆ. 1,100ಕ್ಕೂ ಅಧಿಕ ಜನರು ನೆರವಿಗಾಗಿ ಕರೆ ಮಾಡಿದ್ದಾರೆ. ರವಿವಾರ ರಾತ್ರಿ 18 ಕ್ಷಿಪ್ರ ಕಾರ್ಯಾಚರಣೆ ನಡೆಸಿ ಜನರನ್ನು ಅಪಾಯದಿಂದ ಪಾರು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News