ಪರಿಸರದ ವಿಷಯದಲ್ಲಿ ಮನುಷ್ಯ ಎಚ್ಚೆತ್ತುಕೊಳ್ಳಲಿ: ಚಿಂತಕ ಅಶೋಕವರ್ಧನ
ಮಂಗಳೂರು, ಫೆ. 4: ಕೆಲಸವಿಲ್ಲದ ಇಂಜಿನಿಯರ್‌ವೊಬ್ಬ ಕಟ್ಟಿದ ಕನಸೇ ನೇತ್ರಾವತಿ ನದಿ ತಿರುವು ಯೋಜನೆ. ಎತ್ತಿನಹೊಳೆಯಂಥ ಯೋಜನೆಗಳಲ್ಲಿ ನೀರಿನ ಬದಲು ಹಣದ ಹೊಳೆಯೇ ಹರಿಯುತ್ತಿದೆ. ಮನುಷ್ಯ ಪರಿಸರದ ವಿಷಯದಲ್ಲಿ ಇನ್ನಾದರೂ ಎಚ್ಚೆತ್ತು ಹೆಜ್ಜೆಯಿಡಬೇಕು. ಇಲ್ಲವಾದರೆ ಜೀವಿಗಳ ವಿಕಾಸದಲ್ಲಿ ಡೈನೋಸರ್‌ಗಳಿಗಾದ ಅವಸ್ಥೆಯೇ ಮನುಷ್ಯನಿಗೂ ಆಗುತ್ತದೆ ಎಂದು ಜಿ.ಎನ್. ಅಶೋಕವರ್ಧನ ಎಚ್ಚರಿಸಿದ್ದಾರೆ.
ನಗರದ ಸಂತ ಆ್ಯಗ್ನೆಸ್ ಕಾಲೇಜಿನಲ್ಲಿ ರಥಬೀದಿ ಡಾ.ದಯಾನಂದ ಪೈ, ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಂಗಳೂರು ಆಕಾಶವಾಣಿ ಸಹಭಾಗಿತ್ವದೊಂದಿಗೆ ಸೋಮವಾರ ನಡೆದ ‘ಪರಿಸರ: ವರ್ತಮಾನದ ತಲ್ಲಣಗಳು; ಕಾಯ್ದೆ ಮತ್ತು ಅನುಷ್ಠಾನ’ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಮಾನವನು ಕೃಷಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅರಣ್ಯ ನಾಶ ಮಾಡುವುದರಲ್ಲಿ ತಲ್ಲೀನನಾಗಿದ್ದಾನೆ. ಪರಿಸರ ಸಂಬಂಧಿ ಯೋಜನೆಗಳಲ್ಲಿ ಮಾತಿನ ಚಮತ್ಕಾರ ಕಾಣಿಸುತ್ತಿದೆ. ಇದರಿಂದ ಹಸಿರು ಹೊದಿಕೆ ಇಳಿಮುಖವಾಗುತ್ತಿದೆ. ಗಣಿಗಾರಿಕೆಯಿಂದಾಗಿ ಹೇಗೆ ಹಸಿರು ಹೊದಿಕೆ ಶೂನ್ಯವಾಗುತ್ತಿದೆ. ಇದಕ್ಕೆ ಕುದುರೆಮುಖದ ಅರಣ್ಯವೊಂದರ ಉದಾಹರಣೆ ಸಾಕು ಎಂದು ಅವರು ವಿವರಿಸಿದರು.
ಸಣ್ಣಪುಟ್ಟ ಮಾರಾಟ ಮಳಿಗೆಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ಹಾಕುವುದು ವರ್ಷಗಳಿಂದಲೂ ನಡೆದು ಬರುತ್ತಿದೆ. ಅದನ್ನು ತಯಾರಿಸುವ ಕಾರ್ಕಾನೆಗಳನ್ನು ನಿಲ್ಲಿಸುವ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಕಸ ಸೃಷ್ಟಿಸಿದವರೇ ವಿಲೇವಾರಿ ಮಾಡಬೇಕೆಂದು ಕಡ್ಡಾಯ ಮಾಡಬೇಕಾದ ಸರಕಾರ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಮನೆಮನೆಗೆ ವಾಹನ ಕಳುಹಿಸಿ ಕಸ ಸಂಗ್ರಹಿಸುತ್ತಿದೆ ಎಂದರು.
ರೈಲು ಮಾರ್ಗ, ರಸ್ತೆ ಅಗಲೀಕರಣ, ಕೊಳವೆ ಮಾರ್ಗ, ಅಣೆಕಟ್ಟುಗಳು, ಸುರಂಗ ಮಾರ್ಗಗಳು ಪಶ್ಚಿಮ ಘಟ್ಟವನ್ನು ಸೀಳಿದೆ. ವಿಶ್ವ ಪಾರಂಪರಿಕ ಜಾಗತಿಕ ಮನ್ನಣೆ ಸಿಗುತ್ತದೆಂದಾದರೂ ವನ್ಯಜೀವಿ ಇಲಾಖೆ, ಸರಕಾರ ಕ್ಷಣ ಕಾಲ ವಿಳಂಬ ಮಾಡದೇ ತಿರಸ್ಕರಿಸಿದೆ ಎಂದರು.
ತಂತ್ರಜ್ಞಾನದ ಅಮಲಿನಲ್ಲಿ ಗುಡ್ಡ ಕಡಿದು ಕಣಿವೆ ತುಂಬಿ ರಸ್ತೆ, ಕಟ್ಟಡ ನಿರ್ಮಿಸುವ ಪ್ರವೃತ್ತಿ ಮುಂದುವರಿದಿದೆ. ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಹೆಚ್ಚಿನವರು ಹೊಟ್ಟೆ ಪಾಡಿನವರು. ಯಾವುದೇ ಕೆಲಸಕ್ಕೆ ನ್ಯಾಯ ಒದಗಿಸುವ ಬದಲು ಸ್ವಂತ ಪ್ರಚಾರ, ಹಣ ಗಳಿಸುವುದರಲ್ಲೇ ಮುಳುಗಿದ್ದಾರೆ. ಹೀಗೆ ದುರ್ಬಲಗೊಂಡ ವ್ಯವಸ್ಥೆಯೇ ಪರಿಸರ ತಲ್ಲಣಗಳಿಗೆ ಕಾರಣ ಎಂದರು.
ಸಂತ ಆ್ಯಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಸಿ.ಎಂ.ಜೆಸ್ವೀನಾ ಎ.ಸಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ ಡಿ.ಪುರಾಣಿಕ, ಡಾ.ದಯಾನಂದ ಪೈ-ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್, ಆಕಾಶವಾಣಿ ನಿಲಯ ನಿರ್ದೇಶಕಿ ಉಷಾಲತಾ ಎಸ್. ಮತ್ತಿತರರು ಉಪಸ್ಥಿತರಿದ್ದರು.
ಸಂತ ಆ್ಯಗ್ನೆಸ್ ಕಾಲೇಜು ಕನ್ನಡ ಸಂಘದ ಸಂಚಾಲಕ ಡಾ.ಸಂಪೂರ್ಣಾನಂದ ಬಳ್ಕೂರು ಸ್ವಾಗತಿಸಿದರು. ಅನನ್ಯಾ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕ ಡಾ. ಪ್ರಕಾಶಚಂದ್ರ ಶಿಶಿಲ ವಂದಿಸಿದರು.