ಜೀವನಶೈಲಿಯ ಬದಲಾವಣೆಯಿಂದ ಕ್ಯಾನ್ಸರ್ ನಿಯಂತ್ರಣ: ಡಾ. ಹಸಿಬ್
ಮಂಗಳೂರು, ಫೆ.4: ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗುತ್ತಿರುವ ಕ್ಯಾನ್ಸರ್ ರೋಗವನ್ನು ಜೀವನ ಶೈಲಿಯಲ್ಲಿ ಬದಲಾವಣೆಯ ಮೂಲಕ ನಿಯಂತ್ರಿಸಬಹುದು ಎಂದು ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ರೆ.ಡಾ. ಪ್ರವೀಣ್ ಮಾರ್ಟಿಸ್ ಹೇಳಿದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ರೆಡ್‌ಕ್ರಾಸ್‌ನ ದ.ಕ. ಜಿಲ್ಲಾ ಘಟಕ, ಯುವ ರೆಡ್‌ಕರಾಸ್ ವಿಭಾಗ ಮತ್ತು ರೇಂಜರ್ಸ್ ಹಾಗೂ ರೋವರ್ಸ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ವಿಶ್ವ ಕ್ಯಾನ್ಸರ್ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ರೋಗ ಮಾನವ ಕುಲಕ್ಕೆ ಮಾರಕವಾಗಿದ್ದು, ಈ ಬಗ್ಗೆ ಜಾೃತಿ ಅಗತ್ಯ ಎಂದವರು ಹೇಳಿದರು.
ಕ್ಯಾನ್ಸರ್ ರೋಗದ ಬಗ್ಗೆ ಉಪನ್ಯಾಸ ನೀಡಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಪ್ರೊ. ಡಾ. ಹಸಿಬ್ ಎ.ಜಿ., ಅತಿಯಾದ ತಂಬಾಕು ಪದಾರ್ಥಗಳ ಸೇವನೆ, ಅಲ್ಕೋಹಾಲ್ ಚಟದಿಂದಾಗಿ ಸಾಕಷ್ಟು ಯುವ ಪೀಳಿಗೆ ಇಂದು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ರೀತಿಯಾಗಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವುದನ್ನು ಜಾಗೃತಿಯ ವುೂಲಕ ನಿಯಂತ್ರಿಸಲು ಸಾಧ್ಯ ಎಂದರು.
ವಿಶ್ವದಾದ್ಯಂತ ಕ್ಯಾನ್ಸರ್ ರೋಗದಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪ್ರತಿ ವರ್ಷ 9.6 ಮಿಲಿಯ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದರೆ 2030ರ ವೇಳೆಗೆ ಇದು 13 ಮಿಲಯಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಕ್ಯಾನ್ಸರ್‌ನಿಂದಾಗಿ 2.5 ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದು, ಪ್ರತಿ ವರ್ಷ 7 ಲಕ್ಷ ಜನ ಹೊಸತಾಗಿ ಕ್ಯಾನ್ಸರ್ ರೋಗಿಗಳಾಗುತ್ತಿದ್ದಾರೆ ಎಂದು ಅವರು ಹೇಳಿದರು.
ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್. ಪ್ರಭಾಕರ ಶರ್ಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ರೆಡ್‌ಕ್ರಾಸ್ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ವಹಿಸಿದ್ದರು.