ಕ್ರೀಡಾ ಹಾಸ್ಟೆಲ್ ಗಳ ಪೌಷ್ಠಿಕ ಆಹಾರದ ಅನುದಾನ ದುಪ್ಪಟ್ಟು: ಕ್ರೀಡಾ ಸಚಿವ ರಹೀಂ ಖಾನ್
ಉಡುಪಿ, ಫೆ.4: ರಾಜ್ಯದ ಕ್ರೀಡಾ ವಸತಿ ನಿಲಯಗಳಲ್ಲಿರುವ ಕ್ರೀಡಾಪಟು ವಿದ್ಯಾರ್ಥಿಗಳ ಪೌಷ್ಠಿಕ ಆಹಾರಕ್ಕೆ ನೀಡುವ ಅನುದಾನವನ್ನು ಈ ಬಾರಿಯ ಬಜೆಟ್‌ನಲ್ಲಿ ದುಪ್ಪಟ್ಟುಗೊಳಿಸುವ ಬಗ್ಗೆ ಬಜೆಟ್ ಪೂರ್ವ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ರಹೀಂ ಖಾನ್ ಹೇಳಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅಜ್ಜರಕಾಡಿನಲ್ಲಿ ನಿರ್ಮಿಸಲಾದ 3.75 ಕೋಟಿ ರೂ. ವೆಚ್ಚದ ಸಿಂಥೆಟಿಕ್ ಒಳಾಂಗಣ ಟೆನಿಸ್ ಅಂಕಣ, 1.50 ಕೋಟಿ ರೂ. ವೆಚ್ಚದ ಹವಾನಿಯಂತ್ರಣ ಜಿಮ್ ಕೊಠಡಿ, 1 ಕೋಟಿ ರೂ. ವೆಚ್ಚದ ಬಾಲಕಿಯರ ವಸತಿ ನಿಲಯ ಹಾಗೂ 45ಲಕ್ಷ ರೂ. ವೆಚ್ಚದ ವಿಕಲಚೇತನ ಸ್ನೇಹಿ ಶೌಚಾಲಯ ಮತ್ತು ರ್ಯಾಂಪ್‌ಗಳನ್ನು ಸೋಮವಾರ ಉದ್ಘಾಟಿಸಿದ ಬಳಿಕ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಅವರು ಮಾತನಾಡುತಿದ್ದರು.
ಕ್ರೀಡಾ ತರಬೇತಿಯಲ್ಲಿ ಇನ್ನು ಹೆಚ್ಚಿನ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಆಡಿರುವ ಕ್ರೀಡಾಪಟುಗಳನ್ನು ತರ ಬೇತುದಾರರನ್ನಾಗಿ ನೇಮಕ ಮಾಡಲು ಇಲಾಖೆ ಯೋಜನೆ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು.
ಕ್ರೀಡೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕ್ರೀಡೆಯನ್ನು ಅಭಿವೃದ್ಧಿ ಪಡಿಸಲು ಬೇಕಾದ ಪೂರಕ ವಾತಾವರಣ ಇದೆ. ಅದಕ್ಕೆ ಬೇಕಾದ ಮೂಲಭೂತ ಸೌಲಭ್ಯವನ್ನು ಒದಗಿಸಲು ಪ್ರಯತ್ನಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಮಂಡಿಸಿರುವ ಎಲ್ಲ ಬೇಡಿಕೆಗಳನ್ನು 100ಕ್ಕೆ 100 ಈಡೇರಿಸಲಾಗುವುದು ಎಂದು ಅವರು ಭರವೆ ನೀಡಿದರು.
ಕ್ರೀಡೆಯಲ್ಲಿ ಜಾತಿ, ಧರ್ಮ ಎಂಬ ಯಾವುದೇ ತಾರಮತ್ಯ ಇಲ್ಲ. ಇಲ್ಲಿ ಎಲ್ಲರೂ ಕ್ರೀಡಾ ಮನೋಭಾವನೆಯಿಂದ ದೇಶವನ್ನು ಪ್ರತಿನಿಧಿಸುತ್ತಾರೆ. ಕ್ರೀಡಾ ಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳಿವೆ. ಕ್ರೀಡಾಪಟು ಬದುಕಿನಲ್ಲಿ ಪ್ರಬಲ, ಸತ್ಯ, ಪ್ರಾಮಾಣಿಕನಾಗಿರುತ್ತಾನೆ ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಮಾತನಾಡಿ, ಜಿಲ್ಲೆಯ ಬಹು ಬೇಡಿಕೆಯಾಗಿರುವ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳ ಬೇಕು. ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅದಕ್ಕಾಗಿ ಕೊಳಲಗಿರಿಯಲ್ಲಿರುವ 10 ಎಕರೆ ಜಾಗವನ್ನು ಗುರುತಿಸಲಾಗಿದೆ. ಒಳಾಂಗಣ ಶಟ್ಲ್ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನಾಗಿ ಮೇಲ್ದರ್ಜೆಗೇರಿಸಬೇಕು. ಅದೇ ರೀತಿ ಕ್ರೀಡಾಂಗಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೋಚ್‌ಗಳನ್ನು ಒದಗಿಸಬೇಕು ಎಂದವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನ, ಆಯುಕ್ತ ಕೆ.ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಎಂ.ಎ.ಗಫೂರ್, ಸತೀಶ್ ಅಮೀನ್ ಪಡುಕೆರೆ, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ದೇವಾನಂದ್, ಅರುಣ್ ಕುಮಾರ್, ಕೃಷ್ಣ ಹೆಬ್ಸೂರು ಉಪಸ್ಥಿತರಿದ್ದರು.
ಇಲಾಖೆಯ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ದರು. ಕುಂದಾಪುರ ತಾಲೂಕು ಸಹಾಯಕ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ ವಂದಿಸಿದರು, ಸತೀಶ್‌ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಅಣ್ಣ ತಂಗಿಗೆ 5 ಲಕ್ಷ ರೂ. ಮೊತ್ತದ ಪ್ರಶಸ್ತಿ
ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆಡಿರುವ ಪೆರ್ಡೂರಿನ ಸಚಿನ್ ಶೆಟ್ಟಿ (30) ಹಾಗೂ ಸಹನ್ ಶೆಟ್ಟಿ(27) ಅವರಿಗೆ ತಲಾ ಐದು ಲಕ್ಷ ರೂ. ಮೊತ್ತದ ಪ್ರಶಸ್ತಿಯನ್ನು ಸಚಿವ ರಹೀಂ ಖಾನ್ ಇದೇ ಸಂದರ್ಭದಲ್ಲಿ ಘೋಷಿಸಿದರು.
ಟೆನಿಸ್‌ನಲ್ಲಿ ಅಂತಾರಾಷ್ಟ್ರೀಯ ಪಂದ್ಯಾಟಗಳನ್ನು ಆಡುವ ಮೂಲಕ ಸಾಧನೆ ಮಾಡಿರುವ ಸಚಿನ್ ಶೆಟ್ಟಿ ಹಾಗೂ ಅವರ ಸಹೋದರಿ ಸಹನ್ ಶೆಟ್ಟಿ ಮುಂದಿನ ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡುವ ನಿಟ್ಟಿನಲ್ಲಿ ಅವರಿಬ್ಬರಿಗೆ ತಲಾ ಐದು ಲಕ್ಷ ರೂ. ಮೊತ್ತದ ಪ್ರಶಸ್ತಿಯನ್ನು ನೀಡಲು ಆಯುಕ್ತರಿಗೆ ಸೂಚನೆ ನೀಡ ಲಾಗಿದೆ ಎಂದು ಸಚಿವರು ತಿಳಿಸಿದರು.
ಸಚಿನ್ ಹಾಗೂ ಸಹನ್ ಇಂದು ಉದ್ಘಾಟನೆಗೊಂಡಿರುವ ಸಿಂಥೆಟಿಕ್ ಒಳಾಂಗಣ ಟೆನಿಸ್ ಕ್ರೀಡಾಂಗಣದಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಪೆರ್ಡೂರಿನ ಎಚ್.ಎಂ.ವಸಂತ್ ಮೋಹನ್ ಶೆಟ್ಟಿಯ ಮಕ್ಕಳು. ಮನೆಯಲ್ಲಿ ಕೋರ್ಟ್ ನಿರ್ಮಿಸಿ ತರಬೇತಿ ಪಡೆದು ಇವರಿಬ್ಬರು ಸಾಧನೆ ಮಾಡಿದ್ದಾರೆ.
ಪತ್ರ ಬರೆದರೆ ಸಮಸ್ಯೆಗೆ ಪರಿಹಾರ
ಕ್ರೀಡಾಪಟುಗಳ ಜೊತೆ ಸರಕಾರ ಹಾಗೂ ಇಲಾಖೆ ಎಂದಿಗೂ ಇರುತ್ತದೆ. ಅವರಿಗೆ ಬೇಕಾದ ಎಲ್ಲ ರೀತಿಯ ಸಹಾಯ ನೀಡಲು ಬದ್ಧರಾಗಿ ದ್ದೇವೆ. ಶಿಕ್ಷಣದ ಶುಲ್ಕ, ಕ್ರೀಡಾ ಸಲಕರಣೆಗಳು ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೆ ಇಲಾಖೆ ಆಯುಕ್ತರು, ಅಪರ ಮುಖ್ಯ ಕಾರ್ಯದರ್ಶಿ ಅಥವಾ ಸಚಿವರಿಗೆ ಪತ್ರ ಬರೆದರೆ ಶೇ. 100ರಷ್ಟು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಸಚಿ ರಹೀಂ ಖಾನ್ ಭರವಸೆ ನೀಡಿದರು.