×
Ad

ಪ್ರಕರಣ ಹಿಂದೆತೆಗೆಯದಿದ್ದಲ್ಲಿ ಹೋರಾಟ: ಎಸ್‌ಡಿಪಿಐ

Update: 2019-02-04 21:32 IST

ಮಂಗಳೂರು, ಫೆ. 4: ಬಾಬ್ರಿ ಮಸೀದಿ ಧ್ವಂಸ ವಿಷಯದ ವಿಚಾರವಾಗಿ ಎಸ್‌ಡಿಪಿಐ ರಾಷ್ಟ್ರೀಯ ಅಭಿಯಾನದ ರಾಜ್ಯ ಉದ್ಘಾಟನಾ ಕಾರ್ಯಕ್ರಮವನ್ನು ಉಳ್ಳಾಲದಲ್ಲಿ ಆಯೋಜಿಸಿತ್ತು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮತ್ತು ಇತರರ ವಿರುದ್ಧ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಜಿಲ್ಲೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.

ಬಾಬ್ರಿ ಮಸೀದಿ ಧ್ವಂಸ ವಿಷಯದ ವಿಚಾರವಾಗಿ ಎಸ್‌ಡಿಪಿಐ ದೇಶದಾದ್ಯಂತ ಫೆ.1ರಿಂದ 28ರವರೆಗೆ ನಡೆಯಲಿರುವ ‘ಬಾಬರಿ ಮಸೀದಿ ಮರಳಿ ಪಡೆಯೋಣ, ಭಾರತವನ್ನು ಮರಳಿಗಳಿಸೋಣ’ ಎಂಬ ರಾಷ್ಟ್ರೀಯ ಅಭಿಯಾನದ ರಾಜ್ಯ ಉದ್ಘಾಟನಾ ಕಾರ್ಯಕ್ರಮವು ಜಿಲ್ಲೆಯ ಉಳ್ಳಾಲದಲ್ಲಿ ನಡೆದಿತ್ತು.

ಪ್ರಕರಣ ಹಿಂದೆತೆಗೆಯದಿದ್ದಲ್ಲಿ ಹೋರಾಟ: ಎಸ್‌ಡಿಪಿಐ

ಕಾರ್ಯಕ್ರಮ ಆಯೋಜಕರ ವಿರುದ್ಧ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ಸುಳ್ಳು ಪ್ರಕರಣ ದಾಖಲಿಸಿ, ಜಿಲ್ಲೆಯಲ್ಲಿ ಶಾಂತಿ ಕೆಡಿಸುವಂತಹ ಕೆಲಸದಲ್ಲಿ ನಿರತವಾಗಿರುವುದನ್ನು ಎಸ್‌ಡಿಪಿಐ ದ.ಕ. ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ.

ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ವಿರುದ್ಧವಾಗಿ ಕಾರ್ಯಕ್ರಮ ಅಯೋಜಿಸಲು ಮಂಗಳೂರಿನಾದ್ಯಂತ ಪ್ರಚಾರಪಡಿಸಿದಾಗ, ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಲು ಸಾಧ್ಯವಾಗದೇ ಮೌನಕ್ಕೆ ಶರಣಾದ ಪೊಲೀಸರು ಸತ್ಯವನ್ನು ಜನತೆಗೆ ತಿಳಿಸಲು ಹೊರಟಾಗ ಈ ರೀತಿಯ ಕ್ರಮ ತೆಗೆಯುವುದರಿಂದ ಪೊಲೀಸರ ನಡೆಯ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿದೆ. ಇದರಲ್ಲಿ ತಾರತಮ್ಯ ನೀತಿಯು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಎಸ್‌ಡಿಪಿಐ ತಿಳಿಸಿದೆ.

ಈ ಪ್ರಕರಣವನ್ನು ಹಿಂದೆಗೆಯದಿದ್ದಲ್ಲಿ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ತಿಳಿಸಿದ್ದಾರೆ.

ಮುಸ್ಲಿಂ ಒಕ್ಕೂಟ ಖಂಡನೆ

ದೇಶದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಯುವಕರು ಉಳ್ಳಾಲದಲ್ಲಿ ಶಾಂತಿಯುತವಾಗಿ ಕಾರ್ಯಕ್ರಮ ನಡೆಸಿದ್ದಾರೆ. ಇದರಿಂದ ಯಾವುದೇ ವ್ಯಕ್ತಿಗೂ ತೊಂದರೆಯಾಗಿಲ್ಲ. ಇಲ್ಲಿ ಪೊಲೀಸ್ ಇಲಾಖೆಯು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ. ಇದನ್ನು ಮುಸ್ಲಿಂ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ.ಅಶ್ರಫ್ ತಿಳಿಸಿದ್ದಾರೆ.

ರಾಜ್ಯ ಸರಕಾರ ಮೆಚ್ಚಿಸಲು ಪ್ರಕರಣ ದಾಖಲು: ಅಲಿ ಹಸನ್

ಸಂಘಟನೆಯ ಆಯೋಜಕರ ಮೇಲೆ ಪ್ರಕರಣ ದಾಖಲಿಸಿರುವುದು ಪಕ್ಷಪಾತಿ ಧೋರಣೆಯಾಗಿದೆ. ರಾಜ್ಯ ಆಡಳಿತ ಪಕ್ಷವನ್ನು ಮೆಚ್ಚಿಸಲು ಪೊಲೀಸರು ಈ ರೀತಿಯ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆಂಬ ಶಂಕೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ನಗರದಾದ್ಯಂತ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿ ದಂತೆ ಬ್ಯಾನರ್‌ಗಳನ್ನು ಹಾಕಿದಾಗಲೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಎಸ್‌ಡಿಪಿಐ ವಿರುದ್ಧ ಪ್ರಕರಣ ದಾಖಲಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಮಂಗಳೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲಿ ಹಸನ್ ತಿಳಿಸಿದ್ದಾರೆ.

ಪೊಲೀಸರಿಂದ ತಾರತಮ್ಯ: ವಸಂತ ಆಚಾರಿ

ಬಾಬ್ರಿ ಮಸೀದಿ ಧ್ವಂಸ ವಿಷಯದ ವಿಚಾರವಾಗಿ ಎಸ್‌ಡಿಪಿಐ ಕಾರ್ಯಕ್ರಮ ಹಮ್ಮಿಕೊಂಡಿರುವುದರ ವಿರುದ್ಧ ಕೇಸು ದಾಖಲಿಸುವ ಬದಲು, ರಾಷ್ಟ್ರ ವಿರೋಧಿ ಘೋಷಣೆಗಳನ್ನು ಕೂಗುವ ಸಂಘಟನೆಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು. ಕೆಲವು ಸಂಘಟನೆಗಳು ದೇಶ ವಿರೋಧಿ ಘೋಷಣೆ ಕೂಗಿದರೂ ಕೇಸು ಹಾಕದೇ ಪೊಲೀಸರು ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ. ಎಲ್ಲ ಸಂಘಟಕರು ಪೊಲೀಸರಿಗೆ ತಿಳಿಸಿಯೇ ಕಾನೂನು ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಸುವುದು ಅಗತ್ಯ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಹೇಳಿದ್ದಾರೆ.

ದಕ್ಷಿಣ ಕನ್ನಡ ಇಮಾಮ್ಸ್ ಕೌನ್ಸಿಲ್ ಖಂಡನೆ

ಇತ್ತೀಚೆಗೆ ಉಳ್ಳಾಲದಲ್ಲಿ ಆಯೋಜಿಸಿದ ಬಾಬರಿ ಮಸ್ಜಿದ್ ಕುರಿತಾದ ವಸ್ತುನಿಷ್ಠ ಮಾಹಿತಿಗಳ ಪ್ರದರ್ಶನ ಹಾಗೂ ವಿಚಾರ ಮಾಹಿತಿ ವಿನಿಮಯ ಕಾರ್ಯಕ್ರಮವನ್ನು ಗುರಿಯಾಗಿಸಿ ಉಳ್ಳಾಲ ಪೊಲೀಸರು ಸ್ವಯಂ ಪ್ರೇರಿತವಾಗಿ ಸಂಘಟಕರಾದ ಅಥಾವುಲ್ಲಾ ಜೋಕಟ್ಟೆ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ  ಇಮಾಮ್ಸ್ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ರಫೀಕ್ ದಾರಿಮಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹಿಂದೂ ರಾಷ್ಟ್ರ ನಿರ್ಮಾಣ ಎಂಬ ಸಂವಿಧಾನ ವಿರೋಧಿ ಬ್ಯಾನರ್ ಹಾಕಿದಾಗ ದೇಶದ್ರೋಹ ಕೃತ್ಯಗಳು ನಡೆದಾಗ, ಸುವರ್ಣ ಚಾನೆಲ್ ನಲ್ಲಿ ಪ್ರವಾದಿಯವರನ್ನು ನಿಂದಿಸಿದಾಗ, ದೇಶದ ಮುಸಲ್ಮಾನರನ್ನು ನಾಶ ಮಾಡುತ್ತೇವೆ ಎಂದು ಮಾತನಾಡಿದಾಗ, ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಾಕುತ್ತೇವೆ ಎಂದಾಗ, ಕುದ್ರೋಲಿ ಯನ್ನು ಭಯೋತ್ಪಾದನೆ ಕೇಂದ್ರ ಎಂದು ಕರೆದಾಗ ದಾಖಲಾಗದ ಸ್ವಯಂ ಪ್ರೇರಿತ ಕೇಸು, ಬಾಬರಿ ಮಸ್ಜಿದ್ ವಿಚಾರ ಮಾಹಿತಿ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರಾದ  ಅಥಾವುಲ್ಲಾ ಜೋಕಟ್ಟೆ ಸ್ವಯಂ ಪ್ರೇರಿತ ಕೇಸು ದಾಖಲಾಗುತ್ತದೆ, ಇಂತಹ ನಡೆ ಖಂಡಿತವಾಗಿಯೂ ಸಮಾಜಕ್ಕೆ ತುಂಬಾ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

''ಬಾಬರಿ ಎಕ್ಸ್‌ಪೋದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆಯವರು ಮಾಡಿದ ತಪ್ಪೇನೆಂದು ನನಗೆ ಯಾವ ಕೋನದಲ್ಲಿ ಯೋಚಿಸಿದರೂ ಹೊಳೆಯುತ್ತಿಲ್ಲ. ಮಂಗಳೂರಿನಲ್ಲಿ ಸಂಘಪರಿವಾರದ ಮುಖಂಡರು ಕಾನೂನಿನ ಭಯಭೀತಿಯಿಲ್ಲದೇ ‘ಹೊಡಿ ಬಡಿ’ ಎಂದು ಕರೆಕೊಡುವಾಗ ಬೆರ್ಚಪ್ಪನಂತೆ ನಿಲ್ಲುವ ಪೊಲೀಸರಿಗೆ, ಹತ್ತಾರು ನೇರ ಕೋಮು ಪ್ರಚೋದಕ ಹೇಳಿಕೆಗಳಿರುವ ಫ್ಲೆಕ್ಸ್ ಬ್ಯಾನರ್‌ಗಳ ಮೇಲೆ ಕೇಸು ದಾಖಲಿಸಿದರೂ ಕ್ರಮ ತೆಗೆದುಕೊಂಡಿಲ್ಲ. ಪೊಲೀಸರಿಗೆ ನಗ್ನ ಸತ್ಯವನ್ನು ಹೇಳುವುದು ಮಾತ್ರ ಮಹಾಪರಾಧವಾಗಿ ಕಾಣುತ್ತದೆ. ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಬೇಕೆಂಬ ಪ್ರಜ್ಞೆ ಬರುವುದರ ಹಿಂದೆ ನಿಸ್ಸಂಶಯವಾಗಿಯೂ ಷಡ್ಯಂತ್ರವಿದೆ. ಅಥಾವುಲ್ಲಾ ಅವರ ಮೇಲಿನ ಕೇಸನ್ನು ಹಿಂದೆಗೆಯಬೇಕು. ಸಂಘ ಪರಿವಾರದ ಕೈಗೊಂಬೆಗಳಂತೆ ವರ್ತಿಸುವ ಪೋಲೀಸರ ಮೇಲೆಯೇ ಗೃಹ ಇಲಾಖೆ ಕ್ರಮ ಸೂಕ್ತ ಕ್ರಮ ಕೈಗೊಳ್ಳಬೇಕು''.
- ಇಸ್ಮತ್ ಪಜೀರ್
ಲೇಖಕರು ಮತ್ತು ಸಾಮಾಜಿಕ ಕಾರ್ಯಕರ್ತರು

ಎಸ್‌ಡಿಪಿಐ ನಡೆಸಿದ ಕಾರ್ಯಕ್ರಮದ ಆಯೋಜಕರ ವಿರುದ್ಧ ಕೇಸು ದಾಖಲಿಸಿರುವುದು ಸತ್ಯ. ಇತ್ತೀಚೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂಬ ಸುದ್ದಿ ತಿಳಿದಿದ್ದು, ಆ ಕಾರ್ಯಕ್ರಮದ ವಿವರನ್ನು ಪೊಲೀಸ್ ಇಲಾಖೆ ತರಿಸಿಕೊಳ್ಳಲಿದೆ. ಕೇಸು ಪರಿಶೀಲನೆಯಲ್ಲಿದೆ.

ಹನುಮಂತರಾಯ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News