ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವರ್ಗಾವಣೆ
ಉಡುಪಿ, ಫೆ.4: ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರನ್ನು ಬೆಂಗಳೂರು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ಸರಕಾರ ವರ್ಗಾವಣೆಗೊಳಿಸಿ ಆದೇಶ ನೀಡಿದೆ.
ಹುಬ್ಬಳ್ಳಿ- ಧಾರವಾಡದ ಸ್ಪೆಶಲ್ ಪರ್ಪೊಸ್ ವೆಹಿಕಲ್ (ಎಸ್‌ಪಿವಿ) ಇದರ ಆಡಳಿತ ನಿರ್ದೇಶಕಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಲಾಗಿದೆ.
2015ರ ನ.10ರಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹಿಂದಿನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ವರ್ಗಾವಣೆಯ ಬಳಿಕ 2017ರ ಫೆ. 21ರಂದು ಅವರಿಂದ ತೆರವಾದ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಅವರು ಅಕ್ರಮ ಮರಳುಗಾರಿಕೆ ವಿರುದ್ಧ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಂಡಿದ್ದರು. 2017ರ ಎ. 2ರಂದು ರಾತ್ರಿ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರು ಎಂಬಲ್ಲಿ ಅಕ್ರಮ ಮರಳುಗಾರಿಕೆ ಪರಿಶೀಲಿಸಲು ಕುಂದಾಪುರ ಉಪವಿಭಾಗ ದಂಡಾಧಿಕಾರಿ ಶಿಲ್ಪಾ ನಾಗ್ ಸಹಿತ ಆರು ಮಂದಿಯೊಂದಿಗೆ ತೆರಳಿದ್ದ ಅವರ ಮೇಲೆ ಸ್ಥಳೀಯ ಸುಮಾರು 50 ಮಂದಿಯ ಗುಂಪು ದಾಳಿ ನಡೆಸಿ ಕೊಲೆಗೆ ಯತ್ನಿಸಿತ್ತು.
‘ಉಡುಪಿ ಜಿಲ್ಲೆಯಲ್ಲಿ ಕೆಲಸ ಮಾಡಲು ತುಂಬಾ ಖುಷಿಯಾಗಿತ್ತು. ಜಿಲ್ಲಾಧಿಕಾರಿಗಳಿಗೆ ಹಲವು ಸವಾಲಿನ ಕೆಲಸಗಳು ಇರುವುದು ಸಾಮಾನ್ಯ. ಅದೊಂದು ಆಡಳಿತದ ಭಾಗ. ಅಧಿಕಾರಿಗಳು, ನೌಕರರು, ಜನಪ್ರತಿನಿಧಿಗಳು ಎಲ್ಲರು ಸಹಕಾರ ನೀಡಿದ್ದಾರೆ. ಜಿಪಂ ಸಿಇಒ ಆಗಿದ್ದ ನಾನು ಜಿಲ್ಲಾಧಿಕಾರಿಯಾದ ಹಿನ್ನೆಲೆಯಲ್ಲಿ ಇಲ್ಲಿ ಕೆಲಸ ಮಾಡಲು ನನಗೆ ಕಷ್ಟ ಆಗಿಲ್ಲ. ಸಂತೋಷದಿಂದ ಈ ಜಿಲ್ಲೆಯಿಂದ ಹೋಗುತ್ತಿದ್ದೇನೆ’ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರತಿಕ್ರಿಯಿಸಿದ್ದಾರೆ.