×
Ad

ಮಂಗನ ಕಾಯಿಲೆ: ಇನ್ನೂ 9 ಸತ್ತ ಮಂಗಗಳು ಪತ್ತೆ

Update: 2019-02-04 22:02 IST

ಉಡುಪಿ, ಫೆ.4: ಜಿಲ್ಲೆಯಲ್ಲಿ ಸೋಮವಾರ ಮತ್ತೆ 9 ಸತ್ತ ಮಂಗಗಳ ಕಳೇಬರ ಪತ್ತೆಯಾಗಿದ್ದು, ಇವುಗಳಲ್ಲಿ ಮೂರರ ಅಟಾಪ್ಸಿ ನಡೆಸಿ ವಿಸೇರಾವನ್ನು ಶಿವಮೊಗ್ಗ ಮತ್ತು ಮಣಿಪಾಲ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ಇಂದು ಮಣಿಪುರ ಪಿಎಚ್‌ಸಿ ವ್ಯಾಪ್ತಿಯ ಅಲೆವೂರು, ಬೈಲೂರಿನ ಕೌಡೂರಿನಲ್ಲಿ ಎರಡು, ಮುದರಂಗಡಿಯ ಪಡುಕುದ್ರು, ಹೆಬ್ರಿಯ ಹೆಬ್ರಿ ಮತ್ತು ಕಾಸನಮಕ್ಕಿ, ಪಳ್ಳಿಯ ಕುಂಟಾಡಿ, ಬಿದ್ಕಲ್‌ಕಟ್ಟೆಯ ಮೊಳಹಳ್ಳಿ ಹಾಗೂ ಸಿದ್ಧಾಪುರದ ಕೊಡ್ಲಾಡಿಗಳಲ್ಲಿ ಇವು ಪತ್ತೆಯಾಗಿವೆ. ಇವುಗಳಲ್ಲಿ ಅಲೆವೂರು, ಕಾಸನಮಕ್ಕಿ ಹಾಗೂ ಮೊಳಹಳ್ಳಿಗಳಲ್ಲಿ ಸಿಕ್ಕ ಮಂಗಗಳ ಪೋಸ್ಟ್‌ಮಾರ್ಟಂ ನಡೆಸಲಾಗಿದೆ ಎಂದವರು ತಿಳಿಸಿದ್ದಾರೆ.

ರವಿವಾರವೂ ಮೂರು ಮಂಗಗಳ ಕಳೇಬರಗಳು ಹೆಬ್ರಿಯ ಹೆಬ್ರಿ ಮತ್ತು ಚಾರ ಹಾಗೂ ಕುಕ್ಕಂದೂರಿನ ಅಯ್ಯಪ್ಪನಗರಗಳಲ್ಲಿ ಪತ್ತೆಯಾಗಿದ್ದು, ಮೂರು ಕೊಳೆತು ಹೋಗಿದ್ದವು ಎಂದವರು ತಿಳಿಸಿದರು.

ಈ ಮೂಲಕ ಜಿಲ್ಲೆಯ ವಿವಿದೆಡೆಗಳಲ್ಲಿ ಇದುವರೆಗೆ 125 ಸತ್ತ ಮಂಗಗಳು ಪತ್ತೆಯಾಗಿದ್ದು, ಇವುಗಳಲ್ಲಿ 44 ಮಂಗಗಳ ಅಟಾಪ್ಸಿ ನಡೆಸಲಾಗಿದೆ. ಈವರೆಗೆ 36ರ ಫಲಿತಾಂಶ ಬಂದಿದ್ದು, 12ರಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ, 24ರಲ್ಲಿ ಯಾವುದೇ ವೈರಾಣು ಪತ್ತೆಯಾಗಿಲ್ಲ., ಜ.19ರ ನಂತರ ಅಟಾಪ್ಸಿ ನಡೆಸಿದ ಯಾವುದೇ ಮಂಗನಲ್ಲಿ ಕೆಎಫ್‌ಡಿ ವೈರಸ್ ವರದಿಯಾಗಿಲ್ಲ ಎಂದು ಡಾ.ಭಟ್ ನುಡಿದರು.

ಈ ನಡುವೆ ಇಂದು ಜಿಲ್ಲೆಯ ಕರ್ಜೆಯ ಹಲುವಳ್ಳಿ,ತಂತ್ರಾಡಿ ಸೇರಿದಂತೆ ವಿವಿಧ ಶಾಲೆಗಳಿಗೆ ಭೇಟಿ ನೀಡಿರುವ ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿ ಗಳಿಗೆ ಮಂಗನಕಾಯಿಲೆ ಕುರಿತು ಮಾಹಿತಿಗಳನ್ನು ನೀಡಿ, ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News