ಹಿಂದೂಸಭಾದ ಕೃತ್ಯ ದೇಶಕ್ಕೆ ಮಾಡಿದ ದೊಡ್ಡ ಅವಮಾನ: ಸೊರಕೆ
ಉಡುಪಿ, ಫೆ.4: ದೇಶದಲ್ಲಿ ಸಂಘಪರಿವಾರಕ್ಕೆ ಸಂಬಂಧಪಟ್ಟ ಸಂಘಟನೆ ಹಿಂದೂ ಸಭಾ ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಗುಂಡು ಹೊಡೆಯುವುದನ್ನು ಪ್ರಾತ್ಯಕ್ಷಿಕೆ ನಡೆಸಿ ಗೋಡ್ಸೆ ಪ್ರತಿಮೆಗೆ ಮಾಲಾರ್ಪಣೆ ಮಾಡಿರುವುದು ಈ ದೇಶದ ರಾಷ್ಟ್ರ ಪ್ರೇಮಿಗಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಅಪಮಾನ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಟೀಕಿಸಿದ್ದಾರೆ.
ಹುತಾತ್ಮ ದಿನದಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹತ್ಯೆ ಕೃತ್ಯವನ್ನು ಮರು ಸೃಷ್ಟಿಸಿ ಸಂಭ್ರಮಿಸಿದ ಹಿಂದೂ ಮಹಾಸಭಾದ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ನೇತೃತ್ವದಲ್ಲಿ ಇಂದು ಅಜ್ಜರಕಾಡು ಗಾಂಧಿ ಪ್ರತಿಮೆ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಗಾಂಧೀಜಿ ಈ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅಂಥವರಿಗೆ ಅಪಮಾನ ಮಾಡಿರುವುದರಿಂದ ದೇಶವೇ ತಲೆತಗ್ಗಿಸುವಂತಾಗಿದೆ. ಗಾಂಧಿ ಹತ್ಯೆಯನ್ನು ಸಮರ್ಥಿಸುವ ಗೋಡ್ಸೆ ಅನುಯಾಯಿಗಳನ್ನು ದೇಶದ ಜನತೆ ಖಂಡಿಸಬೇಕಾಗಿದೆ. ಸಹ ಸಂಘಟನೆಗಳು ಮಹಾತ್ಮಾ ಗಾಂಧಿಗೆ ಅಪಮಾನ ಮಾಡಿದರೂ ಬಿಜೆಪಿ ಮೌನವಾಗಿರುವುದು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಶಾಸಕ ಗೋಪಾಲ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಪೂರ್, ಕಾರ್ಯದರ್ಶಿ ವೆರೋ ನಿಕಾ ಕರ್ನೆಲಿಯೋ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಹಾಗೂ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸತೀಶ್ ಅಮೀನ್ ಪಡು ಕರೆ, ಎಚ್.ನಿತ್ಯಾನಂದ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಶಂಕರ ಕುಂದರ್, ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರವೀಣ್ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಎಂ.ಪಿ. ಮೊಯಿದಿನಬ್ಬ, ಇಸ್ಮಾಯಿಲ್ ಆತ್ರಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬಿ. ನರಸಿಂಹಮೂರ್ತಿ, ಭಾಸ್ಕರ್ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ರೆನಾಲ್ಡ್ ಪ್ರವೀಣ್ ಕುಮಾರ್, ಗಣೇಶ್ ಕೋಟ್ಯಾನ್, ವಿಶ್ವಾಸ್ ಅಮೀನ್, ಹಬೀಬ್ ಅಲಿ, ಮಹಾಬಲ ಕುಂದರ್, ಕೀರ್ತಿ ಶೆಟ್ಟಿ, ಶೇಖರ್ ಜಿ. ಕೋಟ್ಯಾನ್, ಶಬ್ಬೀರ್ ಅಹ್ಮದ್, ಬಿ.ಹಿರಿಯಣ್ಣ, ಕಿರಣ್ ಕುಮಾರ್ ಉದ್ಯಾವರ, ಜನಾರ್ದನ ಭಂಡಾರ್ಕಾರ್, ಗೀತಾ ವಾಗ್ಲೆ, ಚಂದ್ರಿಕಾ ಶೆಟ್ಟಿ, ಡಾ.ಸುನಿತಾ ಶೆಟ್ಟಿ, ಪಂಚಾಯತ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಮೊದಲಾದವರು ಉಪಸ್ಥಿತರಿದ್ದರು.