ಫೆ. 8ರಿಂದ ಕಿದಿಯೂರು ಶಾಲೆಯ ಸುವರ್ಣ ಸಂಭ್ರಮ
ಉಡುಪಿ, ಫೆ.4: ಹಲವು ಪ್ರತಿಭಾವಂತರನ್ನು ಸಮಾಜಕ್ಕೆ ನೀಡಿದ ಕಿದಿಯೂರಿನ ಶ್ರೀವಿದ್ಯಾಸಮುದ್ರ ತೀರ್ಥ ಪ್ರೌಢ ಶಾಲೆ ಇದೀಗ ತನ್ನ ಸ್ಥಾಪನೆಯ 50 ವರ್ಷಗಳನ್ನು ಪೂರೈಸಿದ್ದು, ಇದೇ ಫೆ.8ರಿಂದ 10ರವರೆಗೆ ಮೂರು ದಿನಗಳ ಕಾಲ ಸುವರ್ಣ ಸಂಭ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಶಾಲೆಯ ಹಳೆವಿದ್ಯಾರ್ಥಿ ಕೆ.ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಭಾಂಗಣ, ನೂತನ ಬಯಲು ರಂಗವೇದಿಕೆಗಳ ಉದ್ಘಾಟನೆಗಳೊಂದಿಗೆ, ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನಡೆಯಲಿದೆ.ಇದರೊಂದಿಗೆ ಹಳೆ ವಿದ್ಯಾರ್ಥಿ ಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನೆಯೂ ನಡೆಯಲಿದೆ ಎಂದರು.
ಫೆ.8ರಂದು ಬೆಳಗ್ಗೆ 9:30ಕ್ಕೆ ನೂತನ ಸಭಾಂಗಣ ಮತ್ತು ಬಯಲು ವೇದಿಕೆಯ ಉದ್ಘಾಟನೆ ಹಾಗೂ ಹೊಸ ವಿಜ್ಞಾನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಉದ್ಯಮಿ ಡಾ.ಜಿ.ಶಂಕರ್ ಸಭಾಂಗಣವನ್ನು ಉದ್ಘಾಟಿಸುವರು. ಯು.ಹರಿಯಪ್ಪ ಕೋಟ್ಯಾನ್ ಶಂಕುಸ್ಥಾಪನೆ ನೆರವೇರಿಸು ವರು ಎಂದರು. ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸಂಜೆ 7:30ರಿಂದ ಸುವರ್ಣ ಸಂಭ್ರಮವನ್ನು ಡಾ.ಜಿ.ಶಂಕರ್ ಉದ್ಘಾಟಿಸಲಿದ್ದು, ಕಾಣಿಯೂರುಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಸಾಧಕರಿಗೆ ಹಾಗೂ ದಾನಿಗಳಿಗೆ ಸನ್ಮಾನವೂ ನಡೆಯಲಿದೆ. ಫೆ.9ರ ಶನಿವಾರ ಸಂಜೆ 6:00ರಿಂದ ಯಕ್ಷ-ಗಾನ-ನೃತ್ಯ-ವೈಭವ ನಡೆಯಲಿದೆ. ರಾತ್ರಿ 8:00ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಈ ದಿನ ನಿವೃತ್ತ ಪ್ರೌಢ ಶಾಲಾ ಶಿಕ್ಷಕ, ಶಿಕ್ಷಕೇತರರಿಗೆ ಸನ್ಮಾನ ನಡೆಯಲಿದೆ.
ಫೆ.10ರಂದು ರವಿವಾರ ಹಳೆವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 10:30ಕ್ಕೆ ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಎಸ್.ಗೋಪಾಲಕೃಷ್ಣ ಭಟ್ ಉದ್ಘಾಟಿಸುವರು. ಪ್ರತಿಭಾವಂತ ಮತ್ತು ಸಾಧಕ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ. ಸಂಜೆ 7:30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಗೌರವ ಸಲಹೆಗಾರರಾದ ಪ್ರೊ.ರಾಧಾಕೃಷ್ಣ ಆಚಾರ್ಯ, ಉಪಾಧ್ಯಕ್ಷ ಹಿರಿಯಣ್ಣ ಟಿ.ಕಿದಿಯೂರು, ಪ್ರಧಾನ ಕಾರ್ಯದರ್ಶಿ ಗುಂಡು ಬಿ.ಅಮೀನ್ ಕಿದಿಯೂರು, ಕಾರ್ಯದರ್ಶಿ ಜಗನ್ನಾಥ ಕಡೆಕಾರ್, ಸಲಹಾ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ರಾವ್, ಸಂಪತ್‌ಕುಮಾರ್ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಮರೀನಾ ಸರೋಜ ಉಪಸ್ಥಿತರಿದ್ದರು.