ಫೆ.16: ಕರಾವಳಿ ಪರಿಸರ - ಅರಣ್ಯ ಪರಿಸ್ಥಿತಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ
ಭಟ್ಕಳ, ಫೆ. 4: ಕರಾವಳಿ ಪರಿಸರ - ಅರಣ್ಯ ಪರಿಸ್ಥಿತಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಫೆ.16 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಭಟ್ಕಳದ ಸಾಗರ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಪಶ್ಚಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ.
ಕರಾವಳಿ ಪರಿಸರ ಪರಿಸ್ಥಿತಿ ಕುರಿತು ಒಂದು ದಿನದ ವಿಚಾರ ಸಂಕಿರಣ ಆಯೋಜಿಸಲಾಗಿದ್ದು ವೃಕ್ಷಲಕ್ಷ ಆಂದೋಲನ, ಸೆಂಟರ್‍ಫಾರ್ ಪಾಲಿಸಿ ರಿಸರ್ಚ ಕಾರವಾರ ಇವರ ಸಹಯೋಗದಲ್ಲಿ ನಡೆಯಲಿರುವ ವಿಚಾರ ಸಂಕಿರಣಕ್ಕೆ ಅರಣ್ಯ, ಕರಾವಳಿ ಪರಿಸರ ತಜ್ಞರು ಆಗಮಿಸಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಕರಾವಳಿಯ ಪ್ರಚಲಿತ ವಿದ್ಯಮಾನಗಳು, ಜೌಗು ಭೂಮಿ, ಅಳಿವೆ, ಕಾಂಡ್ಲಾಗಳ ಸಂರಕ್ಷಣೆ ಸಿ.ಆರ್.ಜಡ್. ಕಾಯಿದೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಅಧ್ವಾನಗಳು ಕುರಿತು ತಜ್ಞರು ಮಾಹಿತಿ ವರದಿ ಮಂಡನೆಮಾಡಲಿದ್ದು ಸಂಜೆ ಸಂವಾದ ನಡೆಯಲಿದೆ. ಪ್ಲಾಸ್ಟಿಕ್ ಮಾಲಿನ್ಯ ತಡೆ ಕುರಿತ ಪ್ರಯೋಗಗಳು ಮಂಡಿತವಾಗಲಿದ್ದು ಕರಾವಳಿಯ ಹಸಿರು ಕವಚ ಯೋಜನೆ ಫಲಶೃತಿ ಕುರಿತೂ ಮಾಹಿತಿ ನೀಡಲಿದ್ದಾರೆ. ವಿಚಾರ ಸಂಕಿರಣದಲ್ಲಿ ಕಾರವಾರದ ವಿ.ವಿ. ಸ್ನಾತಕೋತ್ತರ ಕೇಂದ್ರ, ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಭಾಗವಹಿಸಲಿದ್ದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9448221117, 9481461612 ಇವರನ್ನು ಸಂಪರ್ಕಿಸಬಹುದು ಎಂದರು.
ವಿಚಾರ ಸಂಕಿರಣದಲ್ಲಿ ಅರಣ್ಯ ಇಲಾಖೆ, ಅರಣ್ಯ ಕಾಲೇಜು, ಕೃಷಿ ವಿಜ್ಞಾನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಕಾರ ನೀಡಲಿದ್ದು ಜಿಲ್ಲಾ ಅರಣ್ಯ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರ, ಅರಣ್ಯ ಕಾಲೇಜು, ಕದಂಬ ಸಾವಯವ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.