×
Ad

ಝೇಂಕಾರ ಕಲಾ ಸಂಘದ ದಶಮಾನೋತ್ಸವ; ಕಲಾಪ್ರತಿಭೋತ್ಸವ

Update: 2019-02-04 22:24 IST

ಭಟ್ಕಳ, ಫೆ. 4: ಝೇಂಕಾರ ಕಲಾಸಂಘ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ ಮಟ್ಟದಲ್ಲಿ ಗಮನಸೆಳೆಯುವ ಮೂಲಕ ಭಟ್ಕಳದ ಹೆಸರನ್ನು ನಾಡಿನುದ್ದಗಲಕ್ಕೂ ಪ್ರಸರಿಸುತ್ತಿದ್ದು ಜಿಲ್ಲೆಯ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.

ಅವರು ಇಲ್ಲಿನ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಝೇಂಕಾರ ಕಲಾ ಸಂಘದ ದಶಮಾನೋತ್ಸವದ ಪ್ರಯುಕ್ತ ಎರ್ಪಡಿಸಲಾಗಿದ್ದ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೇವಲ ಹತ್ತು ವರ್ಷದಲ್ಲಿಯೇ ನಮ್ಮೂರಿನ ಈ ಸಂಸ್ಥೆ ಇಂದು ಅನೇಕ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಪುಟ್ಟ ಮಕ್ಕಳಲ್ಲಿರುವ ಕಲೆಯನ್ನು ಪ್ರೋತ್ಸಾಹಿಸುತ್ತಾ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಅವರ ಪ್ರತಿಭೆಯನ್ನು ಬೆಳಗಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.  ಜಿಲ್ಲೆಯ ಕುಮಟಾದಲ್ಲಿ ಉತ್ತಮ ಕಲಾ ಪೋಷಕರಿದ್ದಾರೆ, ಅದೇ ರೀತಿ ನಮ್ಮ ತಾಲೂಕಿನ ಝೇಂಕಾರ್ ಕಲಾ ಸಂಘ ಕಲಾ ಪೋಷಕರಾಗಿ ಅನೇಕ ಮಕ್ಕಳಿಗೆ ಕಲೆಯನ್ನು ದಾರೆಯೆರೆಯುತ್ತಿರುವುದು ಸಂತಸದ ವಿಷಯ ಎಂದೂ ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಝೇಂಕಾರ್ ಕಲಾಸಂಘದ ಅಧ್ಯಕ್ಷ ಪ್ರಸನ್ನ ಪ್ರಭು ಮಾತನಾಡಿ ಕಲಾಸಕ್ತರಿಗೆ ವಾರದ ಏಳು ದಿನಗಳು ತರಬೇತಿ ನೀಡುವ ಉದ್ದೇಶವಿದೆ. ಅದಕ್ಕಾಗಿ ಕಳೆದ ಹತ್ತು ವರ್ಷಗಳಿಂದ ಸ್ವಂತ ಕಟ್ಟಡ ಕನಸು ಕಾಣುತ್ತಿದ್ದು ಅದಕ್ಕೆ ದಾನಿಗಳು ಸಹಕರಿದಲ್ಲಿ ಮುಂದಿನ ದಿನಗಳಲ್ಲಿ ಕಲಾಭವನ ನಿರ್ಮಿಸಿ ಹೆಚ್ಚಿನ ಸೇವೆ ನೀಡಲು ಅನುಕೂಲವಾಗುತ್ತದೆ ಎಂದರು. 

ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದ ಶ್ರೀ ನಾಗಯಕ್ಷೇ ಧರ್ಮಾರ್ಥ ಸಭಾಭವದ ಸಂಸ್ಥಾಪಕ ರಾಮದಾಸ ಪ್ರಭು, ಶಿರಾಲಿಯ ಉದ್ಯಮಿ ಡಿ.ಜೆ. ಕಾಮತ, ಜನತಾ ವಿದ್ಯಾಲಯದ ಪ್ರಾಂಶುಪಾಲ ಎ.ಬಿ. ರಾಮರಥ, ನ್ಯೂ ಇಂಗ್ಲೀಷ ಪಿ.ಯು ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ್, ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ, ಅಟೋರಿಕ್ಷಾ ಯುನಿಯನ್ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿದರು. 

ವನಿತಾ ಮಹಿಳಾ ಮಂಡಳಿ ಅಧ್ಯಕ್ಷೆ ವೀಣಾ ಪೈ ಉಪಸ್ಥಿತರಿದ್ದರು.
ಚಿತ್ರಕಲಾ, ಸಂಗೀತ, ನೃತ್ಯದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುರೇಶ ಪ್ರಭು, ವೆಂಕಟೇಶ ಭಟ್, ನೃತ್ಯ ವಿಧೂಷಿ ನಯನಾ ಪ್ರಸನ್ನ ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕರ್ನಾಟಕ ಸಂಗೀತ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಡಿದರು. ಸಂಜಯ ಗುಡಿಗಾರ ಸ್ವಾಗತಿಸಿದರು. ವಿಧೂಷಿ ನಯನಾ ಪ್ರಸನ್ನ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಸದಸ್ಯ ಹಾಗೂ ಸಂಸ್ಥೆಯ ಪೋಷಕ ಪದ್ಮನಾಭ ಪೈ ವಂದಿಸಿದರು. ಶಿಕ್ಷಕ ಪರಮೇಶ್ವರ ಜಿ. ನಾಯ್ಕ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News