ಫೆ. 5ರಂದು ಪುತ್ತೂರು ಎಪಿಎಂಸಿ 2ನೇ ಅವಧಿಗೆ ಚುನಾವಣೆ
ಪುತ್ತೂರು, ಫೆ. 4: ಇಲ್ಲಿನ ಎಪಿಎಂಸಿಗೆ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯು ಫೆ. 5ರಂದು ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ.
2017ರ ಜೂನ್ 7ರಂದು ಹಾಲಿ ಅಧ್ಯಕ್ಷರಾಗಿರುವ ಬೂಡಿಯಾರ್ ರಾಧಾಕೃಷ್ಣ ರೈ ಅವರ ಅಧ್ಯಕ್ಷತೆಯ ಮೊದಲ ಅವಧಿಯು ಆರಂಭಗೊಂಡಿತ್ತು. ಈ ಅವಧಿಯ 20 ತಿಂಗಳು ಫೆ. 6ಕ್ಕೆ ಪೂರ್ಣಗೊಳ್ಳಲಿದೆ. ಇದೀಗ ಎರಡನೇ ಅವಧಿಗೆ ಚುನಾವಣೆ ನಡೆಯಲಿದ್ದು, 2ನೇ ಅವಧಿಗೆ ಚುನಾವಣೆ ನಡೆಯಲಿದೆ.
ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಚುನಾವಣಾವಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಮಧ್ಯಾಹ್ನ 12ಕ್ಕೆ ನಾಮಪತ್ರ ಪರಿಶೀಲನೆ, ಹಿಂತೆಗೆತ ನಡೆಯಲಿದೆ. ಅಗತ್ಯವಿದ್ದರೆ ಬಳಿಕ ಚುನಾವಣೆ ನಡೆಯಲಿದೆ. ಬಳಿಕ ಚುನಾವಣಾಧಿ ಕಾರಿ ಮುಂದಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಘೋಷಣೆ ಮಾಡಲಿದ್ದಾರೆ.
13 ಮಂದಿ ಸದಸ್ಯ ಬಲವಿರುವ ಪುತ್ತೂರು ಎಪಿಎಂಸಿಯಲ್ಲಿ 11 ಬಿಜೆಪಿ ಮತ್ತು 2 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ.