ಪ್ರಧಾನಿ ಮನ್ ಕಿಬಾತ್ ಗಿಂತ ಮೊದಲು ಜನರ ಪ್ರಶ್ನೆಗಳಿಗೆ ಉತ್ತರಿಸಲಿ: ಯು.ಟಿ.ಖಾದರ್
ಮಂಗಳೂರು, ಫೆ .4: ದೇಶದ ಜನಸಾಮಾನ್ಯರಲ್ಲಿರುವ ಪ್ರಶ್ನೆಗಳಿಗೆ ಪ್ರಧಾನಿ ಉತ್ತರ ನೀಡಲಿ ಬಳಿಕ ಮನ್‌ಕಿ ಬಾತ್ ಕಾರ್ಯಕ್ರಮ ಮಾಡಲಿ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ದೇಶದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಒಬೊಬ್ಬರಾಗಿ ರಾಜಿನಾಮೆ ನೀಡುತ್ತಿದ್ದಾರೆ ಏಕೆ ? ಸಿಬಿಐ ಮುಖ್ಯಸ್ಥರನ್ನು ಮಧ್ಯರಾತ್ರಿಯಲ್ಲಿಯೇ ವಜಾ ಮಾಡಲಾಯಿತು ಏಕೆ ? ನೀತಿ ಆಯೋಗದ ಅಧ್ಯಕ್ಷರು ರಾಜಿನಾಮೆ ನೀಡಿದ್ದಾರೆ ಏಕೆ ? ಅಂಕಿ ಅಂಶ ವಿಭಾಗದ ಮುಖ್ಯಸ್ಥರು ರಾಜಿನಾಮೆ ನೀಡಿದ್ದಾರೆ ಏಕೆ ? ಈ ಬಾರಿಯ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಅನುದಾನ ಕಡಿತ ಮಾಡಲಾಗಿದೆ. ಹೊಸ ಉದ್ಯೋಗ ಸೃಷ್ಟಿಯ ವಿಚಾರಗಳಿಲ್ಲ, ಸರ್ವ ಶಿಕ್ಷಣ ಯೋಜನೆಯಲ್ಲಿ ಶಿಕ್ಷಕರಿಗೆ ಸಂಬಳ ಬರ್ತಾ ಇಲ್ಲ ಏಕೆ ? ಹಿಂದೆ ಸರ್ವ ಶಿಕ್ಷಣ ಯೋಜನೆಯಲ್ಲಿ ಶಾಲೆಗಳ ಕೊಠಡಿ ದುರಸ್ತಿಗೆ ಹಣ ಬಿಡುಗಡೆ ಆಗ್ತಾ ಇತ್ತು. ಈಗ ಎಷ್ಟು ಶಾಲಾ ಕೊಠಡಿಗಳು ದುರಸ್ತಿಯಾಗಿದೆ ? ಎಂದು ಜನರು ಕೇಳುವ ಪ್ರಶ್ನೆಗಳಿಗೆ ಪ್ರಧಾನಿ ಮೊದಲು ಉತ್ತರಿಸಬೇಕಾಗಿದೆ.
ರಾಜ್ಯದಲ್ಲಿ ಬಿಜೆಪಿ ಆಪರೇಶನ್ ಕಮಲವೆಂಬ ಅಸಂವಿಧಾನಿಕ ಕ್ರಮದಲ್ಲಿ ಸರಕಾರವನ್ನು ಉರುಳಿಸಲು ತೊಡಗಿದೆ.ಆದರೆ ಅವರ ಈ ಪ್ರಯತ್ನದಿಂದ ಸಮ್ಮಿಶ್ರ ಸರಕಾರಕ್ಕೆ ಯಾವೂದೇ ತೊಂದರೆಯಾಗುವುದಿಲ್ಲ ಎಂದು ಖಾದರ್ ತಿಳಿಸಿದ್ದಾರೆ.
ಸೋಲಾರ್ ಪ್ಯಾನಲ್ ಅಳವಡಿಕೆಗೆ ಹೊಸ ನಿಯಮ:-ಕಟ್ಟಡಗಳ ಮೇಲ್ಛಾವಣೆಯಲ್ಲಿ ಸೋಲಾರ್ ಅಳವಡಿಕೆಗೆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಪಡೆದಿರುವ ಅನುಮತಿಯಿಂದ ಸಮಸ್ಯೆಯಾಗುವುದಿಲ್ಲ.ರೂಪ್‌ಟಾಪ್ ಸೊಲಾರ್ ಅಳವಡಿಕೆಗೆ ಕಟ್ಟಡ ಪರವಾನಿಗೆಯ ನಿಯಮಾವಳಿಗಿಂತ ಹೊರತಾಗಿ ಅನಮತಿ ನೀಡಲಾಗುವುದು.ಉದಾಹರಣೆಗೆ ನಾಲ್ಕು ಮಹಡಿಯ ಕಟ್ಟಡ ನಿರ್ಮಾಣ ಮಾಡಲು ಅನುಮತಿ ಪಡೆದವರು ಅದರ ಮೇಲೆ ಸೋಲಾರ್ ಅಳವಡಿಸಲು ಯಾವೂದೆ ಸಮಸ್ಯೆಯಾಗುವುದಿಲ್ಲ. ಅನುಮತಿ ನೀಡಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಉರಿ ಚಿತ್ರದ ಪ್ರಸ್ತಾಪ ಬಜೆಟ್‌ನಲ್ಲಿ ಏಕೆ :- ದೇಶದ ಆಡಳಿತಕ್ಕೆ ಸಂಬಂಧಿಸಿದ ಬಜೆಟ್ ಮಂಡನೆಯಲ್ಲಿ ಚಲನಚಿತ್ರ ‘ಉರಿ’ಹೆಸರನ್ನು ಪ್ರಸ್ತಾಪ ಮಾಡುವ ಮೂಲಕ ಬಜೆಟ್ ಮಂಡನೆಯಂತಹ ಪ್ರಮುಖ ವಿಚಾರವನ್ನು ಚಲನಚಿತ್ರದ ಕಥೆಗೆ ಹೋಲಿಸಿರುವುದು ಬಜೆಟ್‌ನ ಘನತೆಯನ್ನು ಕುಗ್ಗಿಸಿದಂತಾಗಿಸಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ನಾನ್ ಸಿಆರ್‌ಝೆಡ್ ಪ್ರದೇಶದಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡುವ ಅಧಿಕಾರ ಸ್ಥಳೀಯ ಪಂಚಾಯತ್‌ಗಳಿಗೆ ನೀಡಲು ನಿರ್ಧರಿಸಲಾಗಿದೆ. ತುಂಬೆಯ ಕಿಂಡಿ ಅಣೆಕಟ್ಟಿನ ಬಳಿ ಸಂಗ್ರಹವಾಗಿರುವ ಮರಳು ತೆಗೆದು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮುಹಮ್ಮದ್ ಮೋನು,ಈಶ್ವರ ಉಳ್ಳಾಲ್,ಮಮತಾ ಗಟ್ಟಿ,ವಿನಯ ರಾಜ್ ಮೊದಲಾದವರು ಉಪಸ್ಥಿತರಿದ್ದರು.