×
Ad

ದೇಶದಲ್ಲಿ ನಿರುದ್ಯೋಗವಿಲ್ಲ ಎಂದ ಕೇಂದ್ರ ಸಚಿವ: ಡಿವೈಎಫ್‌ಐ ಖಂಡನೆ

Update: 2019-02-04 22:42 IST

ಮಂಗಳೂರು, ಫೆ.4: ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ಗೆ ಸರಕಾರ ನಿರೀಕ್ಷಿಸದ ರೀತಿಯಲ್ಲಿ ದೇಶವ್ಯಾಪಿ ತೀವ್ರ ವಿರೋಧ ಹಾಗೂ ಪ್ರತಿರೋಧ ವ್ಯಕ್ತವಾಗುತ್ತಿದ್ದು, ಕೇಂದ್ರ ಸಚಿವ ಅರುಣ್ ಜೇಟ್ಲಿ ದೇಶದಲ್ಲಿ ನಿರುದ್ಯೋಗವೇ ಇಲ್ಲ ಎಂದು ಸಮರ್ಥನೆ ನೀಡುತ್ತಿರುವುದು ಜನತೆಗೆ ಮಾಡುವ ಮಹಾದ್ರೋಹ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ) ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

#WhereIsMyJob ಕಾರ್ಷಿಕ ಬಿಕ್ಕಟ್ಟಿನ ಪರಿಹಾರಕ್ಕಾಗಿ 170ಕ್ಕೂ ಹೆಚ್ಚು ರೈತ ಸಂಘಟನೆಗಳು ಸೇರಿ ಮಾಡಿದ ಕಿಸಾನ್ ಸಂಘರ್ಷ ಯಾತ್ರೆ, ತಮಿಳುನಾಡು ರೈತರು ತಲೆಬುರುಡೆ ಇಟ್ಟು ನಡೆಸಿದ ಪ್ರತಿಭಟನೆ, ಕಾರ್ಮಿಕರು ಪಾರ್ಲಿಮೆಂಟ್ ಚಲೋ, ದಲಿತ, ಮಹಿಳಾ ಸಮುದಾಯ ಹಾಗೂ ನೌಕರರ ವರ್ಗದ ಹೋರಾಟ, ಉದ್ಯೋಗಕ್ಕೆ ಒತ್ತಾಯಿಸಿ ದೇಶವ್ಯಾಪಿ ಯುವಜನರು ಡಿವೈಎಫ್‌ಐ ನಿಂದ ಕಳೆದ ವರ್ಷ ನವಂಬರ್‌ನಲ್ಲಿ ಘೋಷಣೆಯಡಿ ನಡೆಸಿದ ಹೋರಾಟ, ನಿವೃತ್ತ ಸೈನಿಕರು ಪಿಂಚಣಿಗಾಗಿ ನಡೆಸಿದ ಪ್ರತಿಭಟನೆ ಇನ್ನೂ ಹತ್ತಾರು ಐತಿಹಾಸಿಕ ಹೋರಾಟಗಳು ದೇಶದ ಆಡಳಿತ ಕೇಂದ್ರ ನವ ದೆಹಲಿಯಲ್ಲೆ ನಡೆದಿವೆ. ಆಳುವ ಸರಕಾರವೇ ತನ್ನ ಅಸಮರ್ಥತೆಯನ್ನು ಎತ್ತಿ ಹಿಡಿಯುತ್ತಿದೆಯಲ್ಲದೇ ತಾವು ಆಡಳಿತ ನಡೆಸಲು ಅಯೋಗ್ಯರೆಂದು ಜೇಟ್ಲಿ ಹೇಳಿಕೊಂಡಿದ್ದಾರೆ ಎಂದು ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರದಲ್ಲಿ ಇತ್ತಿಚೇಗೆ ನೇಮಕಾತಿ ಸಂದರ್ಭ ಕೋಟಿಗಟ್ಟಲೇ ಯುವಜನರು ಅರ್ಜಿ ಹಾಕಿದ್ದು, ನಿರುದ್ಯೋಗದ ಕರಾಳ ವಾಸ್ತವವನ್ನು ಕಣ್ಣಿಗೆ ರಾಚುವಂತೆ ತೋರುತ್ತಿದೆ. ಭಾರತೀಯ ರೇಲ್ವೆ ಇಲಾಖೆಯ ನೇಮಕಾತಿ ಮಂಡಳಿಯ 62,9067 ಗ್ಯಾಂಗ್ ಮನ್, ಹೆಲ್ಪರ್, ಮೆಕ್ಯಾನಿಕಲ್, ಇಲೆಕ್ಟ್ರಿಷಿಯನ್ ಇತ್ಯಾದಿ ಹುದ್ದೆಗಳಿಗೆ 1 ಕೋಟಿ 90 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇದರಲ್ಲಿ ಬಹುತೇಕರು ಸ್ನಾತಕೋತ್ತರ ಪದವೀಧರರಾಗಿದ್ದಾರೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ಇನ್ನು ಕೇಂದ್ರ ಸರಕಾರದ ಅಡಿಯಲ್ಲೇ ಇರುವ ಹಲವು ಇಲಾಖೆಗಳಲ್ಲಿ (ಎಲ್‌ಐಸಿಯಂತಹ ಬೃಹತ್ ಸಂಸ್ಥೆಗಳನ್ನು ಹೊರತುಪಡಿಸಿ) 25ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇನ್ನೂ ಆಯ ರಾಜ್ಯಗಳಲ್ಲಿಯೂ ಕೂಡ ಲಕ್ಷಾಂತರ ಹುದ್ದೆಗಳು ಖಾಲಿ ಬಿದ್ದಿವೆ. ಕೋಟ್ಯಂತರ ಯುವಜನತೆ ಉದ್ಯೋಗವಿಲ್ಲದೇ ದಿನನಿತ್ಯ ಪರದಾಡುತ್ತಿದ್ದರೂ ಕೇಂದ್ರ ಸಚಿವರು ಜನತೆಯನ್ನು ದಿಕ್ಕು ತಪ್ಪಿಸಲು ಈ ರೀತಿ ಸುಳ್ಳಿನ ದಾರಿಗೆ ಶರಣಾಗಿದ್ದಾರೆ ಎಂದು ಹೇಳಿದರು.

ದೇಶವನ್ನು ದಿವಾಳಿ ಅಂಚಿಗೆ ತಲುಪಿಸಿ, ಯುವಜನರಿಗೆ ಉದ್ಯೋಗ ಒದಗಿಸದೇ ನಿರುದ್ಯೋಗ ಹೆಚ್ಚಳಕ್ಕೆ ಕಾರಣವಾಗಿರುವ ಕೇಂದ್ರದ ವಿರುದ್ಧ ಹೋರಾಟಕ್ಕೆ ಮುಂದಾಗಬೇಕೆಂದು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ. ಕೂಡಲೇ ಸಚಿವರು ದೇಶದ ಜನತೆಗೆ ನೀಡಿದ ಈ ಸುಳ್ಳು ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆಯಾಚಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಲು ಮುಂದಾಗಬೇಕೆಂದು ಪ್ರಕಟನೆಯಲ್ಲಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News