ಅತ್ತಾವುಲ್ಲ ಜೋಕಟ್ಟೆ ವಿರುದ್ಧ ಪ್ರಕರಣ ದಾಖಲು: ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಕೈವಾಡ
ಮಂಗಳೂರು, ಫೆ 5: ಉಳ್ಳಾಲದಲ್ಲಿ ನಡೆದ ಬಾಬರಿ ಎಕ್ಸ್ಪೊ ಕಾರ್ಯಕ್ರಮಕ್ಕೆ ಸಂಬಂಧಿಸಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮತ್ತಿತರರ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದರ ಹಿಂದೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ನೇರ ಕೈವಾಡ ಇದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಆರೋಪಿಸಿದ್ದಾರೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಇಂತಹ ವಿಚಾರದಲ್ಲಿ ದ್ವಂದ್ವ ನಿಲುವು ತಾಳುತ್ತಿದೆ. ಈ ಹಿಂದೆ ಸಂಘಪರಿವಾರವು ಧರ್ಮಗಳ ಮಧ್ಯೆ ಕಂದಕ ಸೃಷ್ಟಿವಂತಹ ಹೇಳಿಕೆ, ಘಟನೆ ನಡೆಸಿದ್ದರೂ ಕೂಡಾ ಮೌನ ತಾಳಿರುವ ಪೊಲೀಸರು ಈ ವಿಚಾರದಲ್ಲಿ ತ್ವರಿತವಾಗಿ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.
ಪೊಲೀಸರ ಈ ತಾರತಮ್ಯ ನೀತಿಯ ವಿರುದ್ಧ ಕಾನೂನು ಹೋರಾಟ ಸಹಿತ ಇನ್ನಿತರ ವಿಧದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಶಾಹುಲ್ ಹಮೀದ್, ಇಕ್ಬಾಲ್ ಐ ಎಮ್ ಆರ್, ಇಕ್ಬಾಲ್ ಬೆಳ್ಳಾರೆ, ಮುನೀಬ್ ಬೆಂಗ್ರೆ ಉಪಸ್ಥಿತರಿದ್ದರು.