ಹಳೆ ನಿಶ್ಚಿತ ಪಿಂಚಣಿ ಯೋಜನೆ ಮುಂದುವರಿಸಲು ಆಗ್ರಹ: ಉಡುಪಿ ವಿಮಾ ಪಿಂಚಣಿದಾರರ ಸಂಘದ ಮಹಾಧಿವೇಶನ
ಉಡುಪಿ, ಫೆ.5: ವಿಮಾ ಪಿಂಚಣಿದಾರರ ಸಂಘ ಉಡುಪಿ ವಿಭಾಗ ಇದರ 21ನೇ ವಾರ್ಷಿಕ ಮಹಾಧಿವೇಶನವು ಅಜ್ಜರಕಾಡು ವಿಮಾ ನೌಕರರ ಸಂಘದ ಆವರಣದಲ್ಲಿ ಮಂಗಳವಾರ ಜರಗಿತು.
ಸಭೆಯನ್ನುದ್ದೇಶಿಸಿ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್ ಮಾತನಾಡಿ, 2010ರ ಎ.1ರಿಂದ ನೇಮಕಗೊಂಡ ಉದ್ಯೋಗಿಗಳಿಗೂ ಹೊಸ ಪಿಂಚಣಿ ಯೋಜನೆಯ ಬದಲು ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು. ಈ ಕುರಿತು ಎಲ್ಲೈಸಿಯನ್ನು ಆಗ್ರಹಿಸುವ ವಿಮಾ ನೌಕರರ ಹೋರಾಟದಲ್ಲಿ ಎಲ್ಲರು ಸಕ್ರಿಯರಾಗಿ ಭಾಗವಹಿ ಬೇಕು ಎಂದು ಅವರು ಹೇಳಿದರು.
ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಸರಕಾರ ಜಾರಿಗೆ ತಂದಿರುವ ನಿಶ್ಚಿತ ಅವಧಿಯ ಉದ್ಯೋಗದ ಕಾಯ್ದೆಯ ಅನುಷ್ಟಾನದಿಂದಾಗಿ ಮುಂದಿನ ದಿನಗಳಲ್ಲಿ ಉದ್ಯೋಗಕ್ಕೆ ಸೇರ್ಪಡೆ ಯಾಗುವ ನೌಕರರಿಗೆ ಸೇವಾಭದ್ರತೆ ಇಲ್ಲದಂತಾಗುತ್ತಿದೆ ಎಂದು ತಿಳಿಸಿದರು.
ನಂತರ ನೂತನ ವರ್ಷದ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ.ರಾಘವೇಂದ್ರ ಭಟ್, ಉಪಾಧ್ಯಕ್ಷರುಗಳಾಗಿ ತಿಮ್ಮಪ್ಪಮತ್ತು ರಮೇಶ್ ಸುವರ್ಣ, ಪ್ರಧಾನ ಕಾರ್ಯದರ್ಶಿಯಾಗಿ ಎ. ಮಧ್ವರಾಜ ಬಲ್ಲಾಳ್, ಜೊತೆ ಕಾರ್ಯದರ್ಶಿಯಾಗಿ ಶ್ರೀಪತಿ ಉಪಾಧ್ಯ, ಖಜಾಂಚಿಯಾಗಿ ಎ.ರಮೇಶ್ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಕೆ.ರಾಘವೇಂದ್ರ ಭಟ್ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎ.ಮಧ್ವರಾಜ ಬಲ್ಲಾಳ ಗತ ವರ್ಷದ ವರದಿಯನ್ನು ಮಂಡಿಸಿದರು.