ಮಣಿಪಾಲ: ಫೆ.7ರಿಂದ ಎಸ್‌ಒಸಿ ‘ಆರ್ಟಿಕಲ್-19’; ಇರಾಕಿ ಒಮರ್ ಮಹಮ್ಮದ್ ಆನ್‌ಲೈನ್ ನೇರ ಉಪನ್ಯಾಸ
ಉಡುಪಿ, ಫೆ.5: ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಷನ್‌ನ ವಾರ್ಷಿಕ ಮಾಧ್ಯಮ ಉತ್ಸವ ‘ಆರ್ಟಿಕಲ್-19’ ಈ ಬಾರಿ ಫೆ.7ರಿಂದ 9ರವರೆಗೆ ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಎಸ್‌ಓಸಿಯ ನಿರ್ದೇಶಕಿ ಡಾ.ಪದ್ಮಾರಾಣಿ ತಿಳಿಸಿದ್ದಾರೆ.
ಇಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಹಲವು ಖ್ಯಾತನಾಮ ಪತ್ರಕರ್ತರು ಉಪನ್ಯಾಸ ನೀಡಲಿದ್ದು, ಪ್ರಬಂಧ ಮಂಡನೆ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ಸ್ಪರ್ಧೆಗಳು ನಡೆಯಲಿವೆ ಎಂದು ಅವರು ತಿಳಿಸಿದರು.
ಈ ಬಾರಿ ಆರ್ಟಿಕಲ್-19ರ ಪ್ರಧಾನ ಅಂಶ ಇರಾಕಿನ ಇತಿಹಾಸ್ಞರೂ, ಅಲ್ಲಿನ ಖ್ಯಾತ ಪತ್ರಕರ್ತರೂ ಆಗಿರುವ ಒಮರ್ ಮಹಮ್ಮದ್‌ರು ಎಸ್‌ಒಸಿಯ ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್ ಮೂಲಕ ನಡೆಸುವ ನೇರ ಸಂವಾದವಾಗಿದೆ. ‘ಮೋಸಲ್ ಐ’ ಎಂದೇ ಖ್ಯಾತರಾಗಿರುವ ಒಮರ್, ತನ್ನ ಬ್ಲಾಗ್‌ಗಳ ಮೂಲಕ ಮೋಸೆಲ್‌ನಲ್ಲಿ ನಡೆಯುತಿದ್ದ ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳ ಬರ್ಬರತೆ ಯನ್ನು ಮೊದಲ ಬಾರಿಗೆ ಬೆಳಕಿಗೆ ತಂದಿದ್ದರು. ಇವರು ಫೆ.8ರಂದು ಅಪರಾಹ್ನ 2:00 ಗಂಟೆಗೆ ಫ್ರಾನ್ಸ್‌ನಿಂದ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮಾತನಾಡು ವರು ಎಂದರು.
ಆರ್ಟಿಕಲ್-19ರ ಉದ್ಘಾಟನೆ ಫೆ.7ರ ಬೆಳಗ್ಗೆ 9:30ಕ್ಕೆ ನಡೆಯಲಿದೆ.ಸ್ವರಾಜ್ ಪತ್ರಿಕೆಯ ಸಲಹಾ ಸಂಪಾದಕ ಹಾಗೂ ಅಂಕಣಕಾರ ಆನಂದ ರಂಗನಾಥನ್ ಅವರು ‘ವಿಜ್ಞಾನ, ಆಯ್ಕೆಯ ಸಾದ್ಯತೆ ಮತ್ತು ಸಾರ್ವಜನಿಕ ಪ್ರವಚನ’ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಅದೇ ದಿನ ಅಪರಾಹ್ನದ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡುವವರು ಮಣಿಪುರದ ಲೇಖಕ ಹಾಗೂ ಚಲನಚಿತ್ರ ನಿರ್ದೇಶಕ ಬಾಬ್ಬಿ ವಾಹೆನ್ಬಮ್. ಮಣಿಪುರ ಚಲನಚಿತ್ರ ಇಡೀ ದೇಶದ ಗಮನ ಸೆಳೆಯುವಂತೆ ಮಾಡಿದವರು ಬಾಬ್ಬಿ. ಅವರು ಫೆ.7ರಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಡಾ.ಪದ್ಮಾರಾಣಿ ನುಡಿದರು.
ಖ್ಯಾತ ತೆಲುಗು ಚಲನಚಿತ್ರ ನಿರ್ದೇಶಕ ಹಾಗೂ ಎಸ್‌ಒಸಿಯ ಹಳೆವಿದ್ಯಾರ್ಥಿ ನಾಗ್ ಅಶ್ವಿನ್ ಅವರು ಫೆ.8ರಂದು ತನ್ನ ಪ್ರಸಿದ್ಧ ಚಲನಚಿತ್ರವಾದ ‘ಮಹಾನತಿ’ಯ ಬಗ್ಗೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಫೆ.9ರಂದು ಇ-ಕ್ರೀಡಾ ಆಟಗಾರ ಹಾಗೂ ಈ-ಆಟದಲ್ಲಿ ತಾಂತ್ರಿಕ ಪರಿಣಿತಿಯನ್ನು ಪಡೆದು, ಅಭಿವೃದ್ಧಿ ಪಡಿಸಿದ ಅರ್ಚಿಸ್ ಮಾನ್ ಪ್ರಧಾನ್. ಇವರು ‘ಭಾರತದಲ್ಲಿ ಇ-ಕ್ರೀಡೆಯ ಚಿತ್ರಣ’ವನ್ನು ತಮ್ಮ ಉಪನ್ಯಾಸದಲ್ಲಿ ನೀಡಲಿದ್ದಾರೆ.
ಇದರೊಂದಿಗೆ ವಿವಿಧ ಆನ್‌ಲೈನ್ ಹಾಗೂ ಆಪ್‌ಲೈನ್ ಸ್ಪರ್ಧೆಗಳು, ಲಲಿತ ಕಲೆ, ಕ್ರಿಯಾಶೀಲ ಬರವಣಿಗೆ ಹಾಗೂ ಕ್ರೀಡೆಗಳ ಕುರಿತು ಸ್ಪರ್ಧೆಗಳು ನಡೆಯಲಿದೆ. ಇದರೊಂದಿಗೆ ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೊನೆಯ ದಿನ ಏಕ್ಸ್‌ಪ್ರೆಸ್ ಎವಾರ್ಡ್ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಲಿದೆ ಎಂದು ಡಾ.ಪದ್ಮಾರಾಣಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಮೇಧ ರೆಡ್ಡಿ, ತಕ್ಷಕ್ ಪೈ ಹಾಗೂ ಪ್ರಸಿದ್ಧ್ ನಾಯರ್ ಉಪಸ್ಥಿತರಿದ್ದರು.