ಉಡುಪಿ: ಫೆ.8ರಂದು ಸಿನಿಮಾ ಕುರಿತ ವಿಚಾರಸಂಕಿರಣ
ಉಡುಪಿ, ಫೆ.5: ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಫೆ.8ರ ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಿನಿಮಾ ಕುರಿತು ‘ಕ್ಲಾಪ್ ಬೋರ್ಡ್ ಎಂಡ್ ಬಿಯಾಂಡ್’ ಎಂಬ ವಿಷಯದ ಕುರಿತು ವಿಚಾರಸಂಕಿರಣವೊಂದು ನಡೆಯಲಿದೆ.
ವಿಚಾರ ಸಂಕಿರಣವನ್ನು ಬೆಳಗ್ಗೆ 10ಕ್ಕೆ ಉದ್ಘಾಟಿಸುವ ಬೆಂಗಳೂರಿನ ಸಿನಿಮಾ ಪತ್ರಕರ್ತ ಗಿರೀಶ್ ರಾವ್ ಹತ್ವಾರ್(ಜೋಗಿ) ಅವರು ಸಿನಿಮಾ ಎಂಬ ಔಟ್ ಡೇಟೆಡ್ ಮಾಧ್ಯಮ ಎಂಬ ವಿಷಯದ ಕುರಿತು ಉಪನ್ಯಾಸ ನೀಡುವರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಜಿ.ವಿಜಯ ಅಧ್ಯಕ್ಷತೆ ವಹಿಸಲಿದ್ದು, ಪ.ಪೂ.ಕಾಲೇಜಿನ ಪ್ರಾಂಶುಪಾಲರಾದ ಮಾಲತಿ ದೇವಿ ಹಾಗೂ ಎಂಜಿಎಂ ಕಾಲೇಜಿನ ಐಕ್ಯುಎಸಿಯ ಸಂಯೋಜಕ ಅರುಣ್‌ಕುಮಾರ್ ಮುಖ್ಯ ಅತಿಥಿಗಳಾ ಗಿರುವರು.
ಬೆಳಗ್ಗೆ 11:30ಕ್ಕೆ ನಡೆಯುವ ಮೊದಲ ಗೋಷ್ಠಿಯಲ್ಲಿ ಚಿತ್ರಕಥಾ ಲೇಖಕ ಬಿ.ಎ.ಸಂವರ್ತ ಸಾಹಿಲ್ ಅವರು ‘ಬರೆಯುವ ಸಿನಿಮಾ, ಮಾಡುವ ಸಿನಿಮಾ, ನೋಡುವ ಸಿನಿಮಾ’ ಕುರಿತು ಮಾತನಾಡಿದರೆ, ಅಪರಾಹ್ನ 2ಗಂಟೆಗೆ ಒಂದು ಮೊಟ್ಟೆ ಕಥೆ ಸಿನಿಮಾ ಖ್ಯಾತಿಯ ನಟ ಹಾಗೂ ನಿರ್ದೇಶಕ ರಾಜ್ ಬಿ.ಶೆಟ್ಟಿ ಅವರು ‘ನೀವೂ ಸಿನಿಮಾ ಮಾಡಬಹುದು’ ಎಂಬ ವಿಷಯದ ಮೇಲೆ ಮಾತನಾಡುವರು.
ಅಪರಾಹ್ನ 3:30ಕ್ಕೆ ಸಮಾರೋಪ ಹಾಗೂ ಎ.ಈಶ್ವರಯ್ಯ ಸ್ಮಾರಕ ಛಾಯಾ ಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಚಿತ್ರ ನಿರ್ದೇಶಕ ಬಿ.ಎಸ್. ಲಿಂಗದೇವರು ‘ನೀವ್ಯಾಕೆ ಸಿನಿಮಾ ಮಾಡಬಾರದು?’ ಎಂಬ ವಿಷಯದ ಮೇಲೆ ಸಮಾರೋಪ ಉಪನ್ಯಾಸ ನೀಡಲಿರುವರು. ಅಕಾಡೆಮಿಯ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಂ ಅಧ್ಯಕ್ಷತೆ ವಹಿಸಲಿದ್ದು, ಡಾ.ಎಂ.ಜಿ. ವಿಜಯ ಹಾಗೂ ಛಾಯಾಗ್ರಾಹಕ ಪೋಕಸ್ ರಘು ಉಪಸ್ಥಿತರಿರುವರು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.