‘ತೆಂಗಿನ ಮರದ ಸ್ನೇಹಿತರು’ ಕೌಶಲ್ಯಾಭಿವೃದ್ಧಿ ತರಬೇತಿಗೆ ಚಾಲನೆ
ಉಡುಪಿ, ಫೆ.5: ಹೊಸದಿಲ್ಲಿಯ ಭಾರತೀಯ ಕೃಷಿ ಕೌಶಲ್ಯ ಪರಿಷತ್‌ನ ಪ್ರಾಯೋಜಕತ್ವದಲ್ಲಿ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ 25 ದಿನಗಳ ತೆಂಗಿನಮರದ ಸ್ನೇಹಿತರು ಕಾಯ ರ್ಕ್ರಮಕ್ಕೆ ಚಾಲನೆ ನೀಡಲಾ ಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಇತ್ತೀಚಿನ ದಿನಗಳಲ್ಲಿ ತೆಂಗಿನ ಮರ ಹತ್ತುವ ಯುವಕರ ಸಂಖ್ಯೆ ಕ್ಷೀಣಿಸಿದ್ದು, ತೆಂಗಿನ ಕಾಯಿಯನ್ನು ಕೀಳಿಸಲು ಹೆಚ್ಚಿನ ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಯುವಕರು ಮತ್ತು ಯುವತಿಯರು ಹೆಚ್ಚಿನ ಆಸಕ್ತಿಯಿಂದ ತೆಂಗಿನ ಮರ ಹತ್ತುವ ಕೌಶಲ್ಯ ವನ್ನು ಪಡೆದಲ್ಲಿ ಹೆಚ್ಚಿನ ಆದಾಯ ಪಡೆಯಬಹುದು ಎಂದರು.
ಕೆವಿಕೆ ಬ್ರಹ್ಮಾವರದ ಹಿರಿಯ ವಿಜ್ಞಾನಿ ಮತ್ತು ಸಂಸ್ಥೆಯ ಮುಖ್ಯಸ್ಥ ಡಾ. ಧನಂಜಯ ಬಿ. ಮಾತನಾಡಿ, ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಹೆಚ್ಚಿನ ಕೌಶಲ್ಯವನ್ನು ಪಡೆದವರಿಗೆ ಉದ್ಯೋಗಾವಕಾಶದ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಗ್ರಾಮೀಣ ಯುವಕ, ಯುವತಿಯರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿ ಕೊಳ್ಳಲಾಗುವ ವಿವಿಧ ಕೃಷಿ ಕೌಶಲ್ಯ ಸಂಬಂಧಿತ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಯು. ಪಾಟೀಲ್, ತರಬೇತಿಯಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸುವಂತೆ ಕರೆ ನೀಡಿದರು.
ಕೆವಿಕೆ ಬ್ರಹ್ಮಾವರದ ವಿಜ್ಞಾನಿ (ತೋಟಗಾರಿಕೆ) ಚೈತನ್ಯ ಎಚ್.ಎಸ್, ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಬಳಿಕ ತರಬೇತಿ ಪಡೆಯತ್ತಿರುವ ಯುವಕ ಯುವತಿಯರಿಂದ ತೆಂಗಿನ ಮರ ಹತ್ತುವ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಯಿತು. 25 ದಿನಗಳ ತರಬೇತಿ ಕಾರ್ಯಕ್ರಮ ದಲ್ಲಿ ತೆಂಗಿನಮರ ಹತ್ತುವ ಕಲಿಕೆಯೊಂದಿಗೆ, ತೆಂಗಿನಲ್ಲಿ ಬರುವ ವಿವಿಧ ರೋಗ, ಕೀಟ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ತರಬೇತುದಾರರಿಗೆ ಮಾಹಿತಿಯನ್ನು ನೀಡಲಾಗುವುದು. ತೆಂಗಿನ ತೋಟದಿಂದ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀರಾ ಉತ್ಪಾದನೆ ಕುರಿತು ಕೇಂದ್ರೀಯ ಪ್ಲಾಂಟೇಷನ್ ಬೆಳೆಗಳ ಸಂಶೋಧನಾ ಕೇಂದ್ರ, ಕಾಸರಗೋಡು, ಸಂಸ್ಥೆಯ ವಿಜ್ಞಾನಿಗಳಿಂದ ತರಬೇತಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.