ಮಂಗನಕಾಯಿಲೆ: ವಿದೇಶಿ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆ
ಉಡುಪಿ, ಫೆ.5: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದಾಗ ಮಂಗನ ಕಾಯಿಲೆಗೆ ತುತ್ತಾಗಿ ಕಳೆದ ಶನಿವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾ ಗಿದ್ದ ಫ್ರಾನ್ಸ್ ಪ್ರಜೆಯಾಗಿರುವ ನೇಪಾಳಿ ಮೂಲದ ಮಹಿಳೆ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಕೆಎಂಸಿಯ ಪ್ರಕಟಣೆ ತಿಳಿಸಿದೆ.
ಫ್ರಾನ್ಸ್‌ನಿಂದ ಬಂದಿರುವ 33ರ ಹರೆಯದ ಈ ಮಹಿಳೆ ತನ್ನ ಗಂಡನೊಂದಿಗೆ ಉತ್ತರ ಕನ್ನಡ ಪ್ರವಾಸದಲ್ಲಿದ್ದಾಗ ಮಂಗನಕಾಯಿಲೆಗೆ ತುತ್ತಾಗಿದ್ದರು. ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಆಕೆ, ಅಲ್ಲಿಂದ ಉತ್ತರ ಕನ್ನಡದ ಪ್ರಸಿದ್ಧ ಪ್ರವಾಸಿ ತಾಣವಾದ ಯಾಣಕ್ಕೆ ತೆರಳಿದ್ದರು. ಯಾಣದಲ್ಲಿ ಆಕೆ ಮಂಗನ ಕಾಯಿಲೆಗೆ ತುತ್ತಾಗಿರುವ ಸಾಧ್ಯತೆ ಇದ್ದು, ಅಲ್ಲಿಂದ ಹಿಂದಿರುಗಿದ ಬಳಿಕ ಆಕೆಗೆ ಜ್ವರ ಕಾಣಿಸಿಕೊಂಡಿತ್ತು. ಮೊದಲು ಗೋಕರ್ಣದಲ್ಲಿ ಬಳಿಕ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣವಾಗದಾಗ ಅವರನ್ನು ಮಣಿಪಾಲಕ್ಕೆ ದಾಖಲಿಸಲಾಗಿತ್ತು. ಪರೀಕ್ಷೆಯ ವೇಳೆ ಆಕೆಯ ದೇಹದಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿತ್ತು. ಇದೀಗ ಚಿಕಿತ್ಸೆಯ ಬಳಿಕ ಆಕೆ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಹೇಳಲಾಗಿದೆ.
ಕೆಎಂಸಿ ಆಸ್ಪತ್ರೆಯಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ವ್ಯಾಪ್ತಿಯ 159 ಮಂದಿ ಶಂಕಿತ ಮಂಗನಕಾಯಿಲೆಯ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಇವರಲ್ಲಿ 55 ಮಂದಿಯಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದರೆ, 91 ಮಂದಿಯಲ್ಲಿ ಸೋಂಕು ಕಂಡುಬಂದಿರಲಿಲ್ಲ. ಇವರಲ್ಲಿ 135 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 24 ಮಂದಿ ಇನ್ನೂ ಚಿಕಿತ್ಸೆ ಪಡೆಯುತಿದ್ದಾರೆ. ಈವರೆಗೆ ಮಣಿಪಾಲದಲ್ಲಿ ಇಬ್ಬರು ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉಣ್ಣಿ ಸರ್ವೇಕ್ಷಣೆ : ಮಣಿಪಾಲದ ಎಂಸಿವಿಆರ್ ಪ್ರಯೋಗಾಲಯದ ತಂಡ ಮಂಗನಕಾಯಿಲೆಗೆ ಕಾರಣವಾಗುವ ವೈರಸ್‌ನ ವಾಹಕವಾಗಿರುವ ಉಣ್ಣಿಗಳ ಸರ್ವೇಕ್ಷಣೆಯನ್ನು ಇಂದು ಶಿರೂರು, ಗೋಳಿಹೊಳೆ ಹಾಗೂ ಕೆರಾಡಿಯ ಆಯ್ದ ಪ್ರದೇಶಗಳಲ್ಲಿ ನಡೆಸಿದ್ದು, ಇದರ ವರದಿಯನ್ನು ನಿರೀಕ್ಷಿಸಲಾ ಗುತ್ತಿದೆ ಎಂದು ಮಂಗನಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ಇನ್ನೂ ಆರು ಮಂಗಗಳು ಮೃತಪಟ್ಟಿದ್ದು, ಇವುಗಳಲ್ಲಿ ಎರಡರ ಅಟಾಪ್ಸಿಯನ್ನು ನಡೆಸಲಾಗಿದೆ. ಇಂದು ಕಾರ್ಕಳ ತಾಲೂಕಿನ ನಂದಳಿಕೆಯ ಪಿಎಚ್‌ಸಿಯ ಪೆರ್ನಡ್ಕ, ಅಜೆಕಾರಿನ ಕಾಡುಹೊಳೆ, ಮಾಳದ ಶಿರ್ಲಾಲುಗಳಲ್ಲಿ ಹಾಗೂ ಕುಂದಾಪುರ ತಾಲೂಕಿನ ಸಿದ್ಧಾಪುರದ ಕೊಡ್ಲಾಡಿ, ಬಿದ್ಕಲ್‌ಕಟ್ಟೆಯ ಮಂಡಳ್ಳಿ ಹಾಗೂ ವಂಡ್ಸೆ ಪಿಎಚ್‌ಸಿಯ ಮೊರ್ಟುನಲ್ಲಿ ಈ ಮಂಗಗಳ ಶವ ಪತ್ತೆಯಾಗಿವೆ. ಇವುಗಳಲ್ಲಿ ಮಂಡಳ್ಳಿ ಹಾಗೂ ಮೊರ್ಟುವಿನಲ್ಲಿ ಸಿಕ್ಕ ಮಂಗಗಳ ಪೋಸ್ಟ್ ಮಾರ್ಟಂ ನಡೆಸಿ ವರದಿಗಾಗಿ ಶಿವಮೊಗ್ಗ ಹಾಗೂ ಮಣಿಪಾಲಗಳ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದವರು ತಿಳಿಸಿದರು.
ಈವರೆಗೆ ಜಿಲ್ಲೆಯಲ್ಲಿ 131 ಮಂಗಗಳ ಶವ ಪತ್ತೆಯಾಗಿದ್ದು, ಇವುಗಳಲ್ಲಿ 46 ಮಂಗಗಳ ಅಟಾಪ್ಸಿ ನಡೆಸಲಾಗಿದೆ. 40 ಮಂಗಗಳ ಪ್ರಯೋಗಾಲಯದ ವರದಿ ಬಂದಿದ್ದು 12ರಲ್ಲಿ ಮಾತ್ರ ಮಂಗನಕಾಯಿಲೆ ಹರಡುವ ವೈರಸ್ ಪತ್ತೆ ಯಾಗಿದ್ದರೆ, 28 ಮಂಗಗಳಲ್ಲಿ ಸೋಂಕು ಪತ್ತೆಯಾಗಿಲ್ಲ. ಜ.8ರಿಂದ 18ರವರೆಗೆ ಸಿಕ್ಕಿದ 12 ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿದ್ದರೆ, ಜ.19ರಿಂದ ಫೆ.2ರವರೆಗೆ ಸಿಕ್ಕಿರುವ ಮಂಗಗಳ ದೇಹದಲ್ಲಿ ವೈರಸ್ ಸೋಂಕು ಕಂಡು ಬಂದಿಲ್ಲ. ಈವರೆಗೆ ಶಂಕಿತ ಮಂಗನಕಾಯಿಲೆಗಾಗಿ ಜಿಲ್ಲೆಯ 25 ಮಂದಿಯ ರಕ್ತ ಪರೀಕ್ಷೆ ನಡೆದಿದ್ದು, ಯಾವುದರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಡಾ.ಪ್ರಶಾಂತ್ ಭಟ್ ಹೇಳಿದರು.
ಜಿಲ್ಲೆಯ ಎಲ್ಲಾ ಪಿಎಚ್‌ಸಿಗಳಲ್ಲಿ ಜ್ವರ ಸಮೀಕ್ಷೆ, ಜಾಗೃತಿ ಕಾರ್ಯಕ್ರಮ ಹಾಗೂ ಮಂಗನ ಕಾಯಿಲೆ ಕುರಿತು ಮಾಹಿತಿ ನೀಡುವ ಕಾರ್ಯಕ್ರಮಗಳು ಇಂದೂ ಮುಂದುವರಿದಿದೆ. ಮಂಗನಕಾಯಿಲೆ ಕಂಡುಬಂದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾಡಿಗೆ ಹೋಗುವಾರ ಬಳಸುವ ಡಿಎಂಪಿ ತೈಲ ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿದೆ ಎಂದು ಡಾ.ಭಟ್ ವಿವರಿಸಿದು.