ಭುವನಪ್ರಸಾದ್ ಹೆಗ್ಡೆ ‘ಸೇವಾಭೂಷಣ’ ಪ್ರಶಸ್ತಿ ಪ್ರದಾನ
ಉಡುಪಿ, ಫೆ. 5: ಯಕ್ಷಗಾನ ಕಲಾರಂಗ ವತಿಯಿಂದ ಸಂಸ್ಥೆಯ ಕೋಶಾ ಧಿಕಾರಿಯಾಗಿದ್ದ ಎಸ್.ಗೋಪಾಲಕೃಷ್ಣರ ನೆನಪಿನಲ್ಲಿ ನೀಡುವ ‘ಸೇವಾಭೂಷಣ ಪ್ರಶಸ್ತಿ’ಯನ್ನು ಕಲಾಪೋಷಕ ಭುವನಪ್ರಸಾದ್ ಹೆಗ್ಡೆ ಮಣಿಪಾಲ ಅವರಿಗೆ ಮಂಗಳವಾರ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್(ನೂತನ ಕಟ್ಟಡ)ನ ಸಭಾಭವನದಲ್ಲಿ ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಮಾತನಾಡಿ, ಸೇವೆಗೆ ಸಾವಿರ ಹಾಗೂ ಸಾವಿಲ್ಲದ ಮುಖಗಳಿವೆ. ಸೇವೆ ಕೊಡುವ ಸಂತೃಪ್ತಿ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಕರ್ತವ್ಯ ಸೇವೆಯಾ ದಾಗ ಸಂತೃಪ್ತಿ ಪ್ರಸಾದವಾಗುತ್ತದೆ. ಕೇವಲ ಪ್ರೀತಿ ಪಾತ್ರರಾದರೆ ಸಾಲದು, ವಿಶ್ವಾಸಕ್ಕೆ ತಕ್ಕಂತೆ ಇರಬೇಕು ಎಂದು ಹೇಳಿದರು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ಬದುಕಿನಲ್ಲಿ ವೌಲ್ಯಾಧಾರಿತ ಪದಗಳಾದ ಸತ್ಯ, ನಿಷ್ಠೆ, ವಿಶ್ವಾಸ, ಪ್ರಮಾಣಿಕತೆ, ಪ್ರೀತಿಯನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಈ ಎಲ್ಲ ಪದಗಳಿಗೆ ಭುವನ ಪ್ರಸಾದ್ ಸೂಕ್ತರಾಗಿದ್ದಾರೆ. ಬದುಕಿನಲ್ಲಿ ಸೌಂದರ್ಯ ಪ್ರಜ್ಞೆ ಎಂಬುದು ಬಹಳ ಮುಖ್ಯ ಎಂದು ತಿಳಿಸಿದರು.
ಮಣಿಪಾಲ ಮಾಹೆಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಉಪಾಧ್ಯಕ್ಷ ಗಂಗಾಧರ ರಾವ್ ಉಪಸ್ಥಿತರಿ ದ್ದರು. ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷ ಎಸ್.ವಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.