ಉಡುಪಿ ಜಿಲ್ಲಾಧಿಕಾರಿ ವರ್ಗಾವಣೆ ಹಿಂದೆ ನವಯುಗ ಕಂಪೆನಿ: ಕರವೇ
ಉಡುಪಿ, ಫೆ.5: ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ವಹಿಸಿಕೊಂಡ ನವಯುಗ ಕಂಪೆನಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಸುಂಕದ ವಸೂಲಾತಿ ಕೇಂದ್ರದ ಇಬ್ಬಗೆ ನೀತಿಯ ವಿರುದ್ಧ ಸಿಡಿದೆದ್ದಿದ್ದ ಉಡುಪಿ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸಿಸ್, ಪಡುಬಿದ್ರಿ ಹಾಗೂ ಬೀಜಾಡಿ ಕಾಮಗಾರಿ ಯನ್ನು ಪೂರ್ಣಗೊಳಿಸಲು 15 ದಿನಗಳ ಕಾಲಾವಕಾಶ ನೀಡಿದ್ದರು. ಇಲ್ಲವಾ ದಲ್ಲಿ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಎಚ್ಚರಿಕೆ ನೀಡಿದ್ದರು.
ಈ ಎಚ್ಚರಿಕೆ ಜಿಲ್ಲಾಧಿಕಾರಿಯ ವರ್ಗಾವಣೆ ಹಿಂದೆ ಇರುವ ಕಾರಣ ಎಂಬ ಸಂಶಯ ಕಾಡುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಆರೋಪಿಸಿದ್ದಾರೆ.
ಇಂತಹ ದಕ್ಷ ಅಧಿಕಾರಿಗಳನ್ನು ಚುನಾವಣಾ ಪೂರ್ವ ವರ್ಗಾವಣೆ ಎಂಬ ನೆಪವನ್ನು ನೀಡಿ ವರ್ಗಾಯಿಸಿ ಸರಕಾರಗಳು ನವಯುಗದಂತಹ ದೊಡ್ಡ ದೊಡ್ಡ ಕಂಪನಿಗಳ ಹಗಲು ದರೋಡೆ ಮತ್ತು ಸರ್ವಾಧಿಕಾರತ್ವಕ್ಕೆ ಕುಮ್ಮಕ್ಕು ನೀಡುತ್ತಿದೆ ಮತ್ತು ಇಂತಹ ಕಂಪನಿಗಳ ಅಡಿಯಾಳಾಗುತ್ತಿರುವುದು ನಮ್ಮ ದೇಶದ ದುರಂತ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.