ಮೋದಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸೆಳೆದ ಶಿವಸೇನೆ

Update: 2019-02-06 03:35 GMT

ಹೊಸದಿಲ್ಲಿ, ಫೆ. 5: 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಶಿವಸೇನೆ ತನ್ನೆಡೆಗೆ ಸೆಳೆದಿದೆ. ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಹಾಗೂ ಪ್ರಶಾಂತ್ ಕಿಶೋರ್ ಠಾಕ್ರೆ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಹಾಗೂ ಒಟ್ಟಾಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ.

ಕಿಶೋರ್ ಬಿಜೆಪಿ ನೇತೃತ್ವದ ಎನ್‌ಡಿಎಯ ಕ್ಷೇತ್ರ ಜನತಾ ದಳ (ಸಂಯುಕ್ತ)ದ ಉಪಾಧ್ಯಕ್ಷ. ಈ ಬೆಳವಣಿಗೆಯನ್ನು ಸೇನೆ ಸಂಸದರೋರ್ವರು ದೃಢಪಡಿಸಿದ್ದಾರೆ. ‘‘ಉದ್ಧವ್ ಜಿ ಅವರು ಪ್ರಶಾಂತ್ ಕಿಶೋರ್ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದಾರೆ. ಶಿವಸೇನೆಯ ಚುನಾವಣಾ ಪ್ರಚಾರದಲ್ಲಿ ಅವರು ಕಾರ್ಯ ತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

ಠಾಕ್ರೆ ಅವರನ್ನು ಭೇಟಿಯಾದ ಬಳಿಕ ಕಿಶೋರ್ ಅವರು ಶಿವಸೇನೆಯ ಸಂಸದರನ್ನು ಭೇಟಿಯಾದರು. ಕಿಶೋರ್ ತಂಡ ಚುನಾವಣಾ ತಂತ್ರಗಳನ್ನು ಸಿದ್ಧಪಡಿಸಲಿದೆ ಹಾಗೂ ಈ ವಾರಾಂತ್ಯದಲ್ಲಿ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ ಎಂದು ಸೇನಾ ಸಂಸದರು ತಿಳಿಸಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲದ ಸಂದರ್ಭ ಶಿವಸೇನೆಯ ಈ ನಡೆ ಬೆಳಕಿಗೆ ಬಂದಿದೆ. ‘‘ಇಂದಿನ ಅಜೆಂಡಾದಲ್ಲಿ ಮೈತ್ರಿಯ ವಿಚಾರ ಇರಲಿಲ್ಲ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಬಿಜೆಪಿ ಶಿವಸೇನೆಗೆ ಅಧಿಕೃತವಾಗಿ ಆಹ್ವಾನ ನೀಡಿಲ್ಲ ಎಂಬ ವಿಚಾರ ಮಾತ್ರ ಚರ್ಚೆಯಾಯಿತು.’’ ಎಂದು ಠಾಕ್ರೆ ಅವರನ್ನು ಭೇಟಿಯಾಗಿರುವ ಸೇನಾ ಸಂಸದರೋರ್ವರು ತಿಳಿಸಿದ್ದಾರೆ.

 ಚುನಾವಣಾ ಯೋಜನೆ ಸಿದ್ಧಪಡಿಸಲು ಹಾಗೂ ಸರ್ವೇ ನಡೆಸಲು ಖಾಸಗಿ ತಂತ್ರಗಾರರ ನೆರವನ್ನು ಸೇನೆ ಪಡೆದುಕೊಳ್ಳುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News